ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಗೆ ಪಿತೃ ವಿಯೋಗ
Lionel Messi father death: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ತಂದೆ ಜಾರ್ಜ್ ಮೆಸ್ಸಿ (68) ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೆಸ್ಸಿಯನ್ನು ಯಶಸ್ವಿ ಆಟಗಾರನನ್ನಾಗಿ ರೂಪಿಸುವಲ್ಲಿ ಜಾರ್ಜ್ ಪ್ರಮುಖ ಪಾತ್ರ ವಹಿಸಿದ್ದರು, ಏಜೆಂಟ್ ಆಗಿಯೂ ಕಾರ್ಯನಿರ್ವಹಿಸಿದ್ದರು. ವಿಶ್ವಕಪ್ ಸಮಯದಲ್ಲಿಯೇ ಮೆಸ್ಸಿ ತಮ್ಮ ತಂದೆಯ ಅನಾರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಅವರ ನಿಧನ ಫುಟ್ಬಾಲ್ ಲೋಕಕ್ಕೆ ತೀವ್ರ ದುಃಖ ತಂದಿದೆ.

ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರ, ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ( Lionel Messi) ಅವರ ತಂದೆ ಜಾರ್ಜ್ ಮೆಸ್ಸಿ (Jorge Messi) 68 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಾರ್ಜ್ ಮೆಸ್ಸಿ ಅವರ ನಿಧನವನ್ನು ಮೆಸ್ಸಿಯವರ ಬಾಲ್ಯದ ಕ್ಲಬ್, ನೆವೆಲ್ಸ್ ಓಲ್ಡ್ ಬಾಯ್ಸ್ ದೃಢಪಡಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ
ಫಿಫಾ ವಿಶ್ವಕಪ್ ಸಮಯದಲ್ಲಿಯೇ ಮೆಸ್ಸಿ ತನ್ನ ತಂದೆಯ ಆರೋಗ್ಯದ ಬಗ್ಗೆ ತುಂಬಾ ಚಿಂತಿತರಾಗಿದ್ದರು. ವಿಶ್ವಕಪ್ ಸಮಯದಲ್ಲಿಯೇ ಮೆಸ್ಸಿ, ತಮ್ಮ ಕುಟುಂಬವು ಕಠಿಣ ಸಮಯವನ್ನು ಎದುರಿಸುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದರು. ಆದರೆ ಅವರು ತಮ್ಮ ತಂದೆಯ ಸ್ಥಿತಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿರಲಿಲ್ಲ. ಇದಾದ ನಂತರ ಮೆಸ್ಸಿ ಕುಟುಂಬ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಜಾರ್ಜ್ ಮೆಸ್ಸಿ ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿತ್ತು.
ಮಗನ ಯಶಸ್ಸಿನಲ್ಲಿ ಅಪ್ಪನ ಶ್ರಮ
ಮೆಸ್ಸಿಯನ್ನು ಯಶಸ್ವಿ ಫುಟ್ಬಾಲ್ ಆಟಗಾರನನ್ನಾಗಿ ಮಾಡುವಲ್ಲಿ ಅವರ ತಂದೆ ಜಾರ್ಜ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಎರಡು ದಶಕಗಳಿಗೂ ಹೆಚ್ಚು ಕಾಲ ಮೆಸ್ಸಿ ಅವರ ಏಜೆಂಟ್ ಮತ್ತು ಸಲಹೆಗಾರರೂ ಆಗಿದ್ದರು, ಬಾರ್ಸಿಲೋನಾ, ಪಿಎಸ್‌ಜಿ ಮತ್ತು ಇಂಟರ್ ಮಿಯಾಮಿಗೆ ಪ್ರಮುಖ ಕ್ಲಬ್ ವರ್ಗಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜೆಂಟೀನಾದ ರೊಸಾರಿಯೋದಲ್ಲಿರುವ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಜ್, ಆರಂಭಿಕ ದಿನಗಳಲ್ಲಿ ಸ್ಥಳೀಯ ಕ್ಲಬ್‌ನಲ್ಲಿ ಮೆಸ್ಸಿಗೆ ತರಬೇತಿ ನೀಡಿಸಿದ್ದರು.
2026 ರ ಫಿಫಾ ವಿಶ್ವಕಪ್‌ನಲ್ಲಿ, ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು, ಆದರೆ ಪ್ರಶಸ್ತಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ 1-0 ಅಂತರದಿಂದ ಸೋತಿತು. ವಿಶ್ವಕಪ್‌ನಲ್ಲಿ ಅಲ್ಜೀರಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಲಿಯೋನೆಲ್ ಮೆಸ್ಸಿ ತುಂಬಾ ಭಾವುಕರಾದರು. ಪಂದ್ಯದ ನಂತರ ಅಳುವುದಕ್ಕೆ ಕಾರಣವೇನೆಂದು ಕೇಳಿದಾಗ, ಮೆಸ್ಸಿ ನನ್ನ ಕಣ್ಣೀರಿಗೂ ಫುಟ್‌ಬಾಲ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ, ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 pm, Sat, 8 August 26




