
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A ) ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಎರಡನೇ ದಿನದಂದು ಶ್ರೀಲಂಕಾ ಎ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಬ್ಯಾಟಿಂಗ್ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudharsan) ಸತತ ಎರಡನೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದರೆ, ದೇವದತ್ ಪಡಿಕ್ಕಲ್ (Devdutt Padikkal) ಕೂಡ 94 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ. ಇಬ್ಬರೂ ಆಟಗಾರರು ಈಗಾಗಲೇ ಎರಡನೇ ವಿಕೆಟ್‌ಗೆ 181 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಎರಡನೇ ದಿನದ ಅಂತ್ಯದ ವೇಳೆಗೆ ಭಾರತ 1 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿದೆ.
ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದ್ದ ಶ್ರೀಲಂಕಾ ಎ ತಂಡ ಎರಡನೇ ದಿನ 76 ರನ್ ಕಲೆಹಾಕುವುದರೊಳಗೆ ಉಳಿದ 5 ವಿಕೆಟ್‌ಗಳನ್ನು ಕಳೆದಕೊಂಡಿತು. ಹೀಗಾಗಿ ಲಂಕಾ ಪಡೆ 366 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಭಾರತ ತಂಡದ ಪರ ಸರಾಂಶ್ ಜೈನ್ ಮತ್ತು ಗುರ್ನೂರ್ ಬ್ರಾರ್ ತಲಾ ನಾಲ್ಕು ವಿಕೆಟ್ ಪಡೆದರೆ, ಯಶ್ ಠಾಕೂರ್ ಕೂಡ ಎರಡು ವಿಕೆಟ್ ಪಡೆದರು. ಈ ಇನ್ನಿಂಗ್ಸ್‌ನಲ್ಲಿ ಆಕಿಬ್ ನಬಿ ದಾರ್ ವಿಕೆಟ್ ಪಡೆಯಲಿಲ್ಲ. ಇತ್ತ ಶ್ರೀಲಂಕಾ ಎ ತಂಡದ ಪರ ನಾಯಕ ಸಹನ್ ಅರಚ್ಚಿಗೆ 127 ರನ್‌ಗಳ ಅದ್ಭುತ ಶತಕ ಗಳಿಸಿದರು.
ಲಂಕಾ ತಂಡವನ್ನು ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ಸುದರ್ಶನ್ ಹಾಗೂ ಅಮನ್ ಮೊಖಡೆ 66 ರನ್‌ಗಳ ಜೊತೆಯಾಟ ನಡೆಸಿದರು. ಆದಾಗ್ಯೂ ಅಮನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಜೊತೆಯಾದ ಸುದರ್ಶನ್ ಹಾಗೂ ಪಡಿಕ್ಕಲ್ ದಿನವಿಡೀ ಲಂಕಾ ಬೌಲರ್ಗಳನ್ನು ಕಾಡಿದರು. ಇದೇ ವೇಳೆ ಸುದರ್ಶನ್ ತಮ್ಮ ಸತತ ಎರಡನೇ ಶತಕವನ್ನು ಕಲೆಹಾಕಿದರು. ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಸಾಯಿ, ಎರಡನೇ ಪಂದ್ಯದಲ್ಲೂ ಅದ್ಭುತ ಶತಕ ಸಿಡಿಸಿದರು.
IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
ಸುದರ್ಶನ್ ಜೊತೆಗೆ ದಾಖಲೆಯ ಜೊತೆಯಾಟ ಕಟ್ಟಿದ ದೇವದತ್ ಪಡಿಕ್ಕಲ್ ಕೂಡ ಶತಕದಂಚಿನಲ್ಲಿದ್ದಾರೆ. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 67 ರನ್ ಗಳಿಸಿದ್ದ ಪಡಿಕ್ಕಲ್ ಈಗ ಎರಡನೇ ಟೆಸ್ಟ್‌ನಲ್ಲಿ ಶತಕದ ಸಮೀಪದಲ್ಲಿದ್ದಾರೆ. ಇಬ್ಬರೂ 301 ಎಸೆತಗಳಲ್ಲಿ 181 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಭಾರತ ಎ ತಂಡವು ಪ್ರಸ್ತುತ ಶ್ರೀಲಂಕಾ ಎ ತಂಡದ ಸ್ಕೋರ್‌ಗಿಂತ 119 ರನ್‌ಗಳ ಹಿಂದಿದ್ದು, ಒಂಬತ್ತು ವಿಕೆಟ್‌ಗಳು ಬಾಕಿ ಉಳಿದಿವೆ. ಇದರರ್ಥ ಎರಡನೇ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ ಎನ್ನಬಹುದು.