
ಏಷ್ಯಾಕಪ್‌ನ (Asia Cup 2025) 17 ನೇ ಸೀಸನ್ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ಯುಎಇಯ ಅಬುಧಾಬಿ ಮತ್ತು ದುಬೈ ನಗರಗಳಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ 8 ತಂಡಗಳು ಭಾಗಿಯಾಗುತ್ತಿರುವ ಈ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತವೆ. 8 ತಂಡಗಳನ್ನು ತಲಾ 2 ಗುಂಪುಗಳಾಗಿ ಮಾಡಲಾಗಿದ್ದು, ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇನ್ನು ಈ ಟೂರ್ನಿಯಲ್ಲಿ ಏಕೈಕ ಡಬಲ್ ಹೆಡರ್ ಪಂದ್ಯ ಇದ್ದು, ಈ ಪಂದ್ಯ ಸೆಪ್ಟೆಂಬರ್ 15 ರಂದು ನಡೆಯಲಿದೆ. ಆ ದಿನ, ಮೊದಲ ಪಂದ್ಯವು ಭಾರತೀಯ ಸಮಯ ಸಂಜೆ 5:30 ಕ್ಕೆ ಪ್ರಾರಂಭವಾದರೆ, ಎರಡನೇ ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ವಾಸ್ತವವಾಗಿ ಈ ಬಾರಿಯ ಏಷ್ಯಾಕಪ್ ಆತಿಥ್ಯದ ಹಕ್ಕು ಭಾರತದ ಕೈಯಲಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧಗಳು ಹದಗೆಟ್ಟಿರುವುದರಿಂದ, ಈಗ ಎರಡೂ ತಂಡಗಳು ಪರಸ್ಪರರ ದೇಶದಲ್ಲಿ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ. ಆದ್ದರಿಂದ, ಬಿಸಿಸಿಐ ಅಧಿಕೃತ ಆತಿಥೇಯವಾಗಿ ಉಳಿದಿದ್ದರೂ, ಈ ಬಾರಿ ಪಂದ್ಯಗಳನ್ನು ಯುಎಇಯಲ್ಲಿ ಆಡಲಾಗುತ್ತದೆ.
ಮೊದಲ ಏಷ್ಯಾಕಪ್ 1984 ರಲ್ಲಿ ನಡೆಯಿತು. ಅಂದರೆ, ಮೊದಲ ಏಕದಿನ ವಿಶ್ವಕಪ್ ನಡೆದ 9 ವರ್ಷಗಳ ನಂತರ ಏಷ್ಯಾಕಪ್ ಆರಂಭವಾಯಿತು. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಮಾತ್ರ ಮೊದಲ ಏಷ್ಯಾಕಪ್‌ನಲ್ಲಿ ಭಾಗವಹಿಸಿದ್ದವು. ಭಾರತ ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಮಾತ್ರವಲ್ಲದೆ ಈ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವೂ ಆಗಿದೆ. 2023 ರಲ್ಲಿ ನಡೆದ ಏಕದಿನ ಸ್ವರೂಪದ ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ 8ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದಿತು. ಭಾರತದ ನಂತರ, ಶ್ರೀಲಂಕಾ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದ್ದು, ಇದು 6 ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಮತ್ತೊಂದೆಡೆ, ಪಾಕಿಸ್ತಾನ ಕೇವಲ 2 ಬಾರಿ ಟ್ರೋಫಿ ಗೆದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಏಷ್ಯಾಕಪ್ ಆರಂಭವಾದಾಗ, ಅದು ಏಕದಿನ ಪಂದ್ಯಾವಳಿಯಾಗಿತ್ತು. ಆದರೆ ಕಳೆದ ದಶಕದಿಂದ ಇದನ್ನು ಟಿ20 ಸ್ವರೂಪದಲ್ಲೂ ಆಡಲಾಗುತ್ತಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುವುದರಿಂದ ಅದರ ತಯಾರಿಗೆ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. 2023 ರಲ್ಲಿ ನಡೆದ ಕೊನೆಯ ಏಷ್ಯಾಕಪ್ ಏಕದಿನ ಸ್ವರೂಪದಲ್ಲಿ ನಡೆದಿತ್ತು. ಏಕೆಂದರೆ ಆ ವರ್ಷ ಏಕದಿನ ವಿಶ್ವಕಪ್ ನಡೆಯುವುದರಲಿತ್ತು.
Asia Cup: ಮೊಟ್ಟ ಮೊದಲ ಏಷ್ಯಾಕಪ್ ಆವೃತ್ತಿ ಯಾವಾಗ ನಡೆದಿತ್ತು, ಯಾವ ತಂಡ ಪ್ರಶಸ್ತಿ ಗೆದ್ದಿತು?
ಈ ಬಾರಿ ಅತಿ ಹೆಚ್ಚು ತಂಡಗಳು ಭಾಗವಹಿಸುತ್ತಿರುವುದು ಈ ಬಾರಿಯ ಏಷ್ಯಾಕಪ್‌ನ ವಿಶೇಷತೆಯಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಮಾತ್ರವಲ್ಲದೆ, ಒಟ್ಟು 8 ತಂಡಗಳು ಏಷ್ಯಾಕಪ್ 2025 ರಲ್ಲಿ ಮೊದಲ ಬಾರಿಗೆ ಆಡುತ್ತಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನೇರ ಅರ್ಹತೆ ಪಡೆದ 5 ತಂಡಗಳಾಗಿವೆ. ಉಳಿದ 3 ತಂಡಗಳಾದ ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ಕಳೆದ ವರ್ಷ ಪುರುಷರ ಎಸಿಸಿ ಪ್ರೀಮಿಯರ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಅರ್ಹತೆ ಪಡೆದುಕೊಂಡಿವೆ.
2025 ರ ಏಷ್ಯಾಕಪ್‌ನಲ್ಲಿ ನೇಪಾಳ ಸ್ಥಾನ ಪಡೆಯದಿರಲು ಕಾರಣ ಕಳೆದ ವರ್ಷ ಪುರುಷರ ಎಸಿಸಿ ಪ್ರೀಮಿಯರ್ ಕಪ್‌ನಲ್ಲಿನ ಕಳಪೆ ಪ್ರದರ್ಶನ. ನೇಪಾಳ ತಂಡವು ತನ್ನ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು ಆದರೆ ಸೆಮಿಫೈನಲ್‌ನಲ್ಲಿ ಯುಎಇ ವಿರುದ್ಧ ಮತ್ತು ನಂತರ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಸೋತಿತು. ಹೀಗಾಗಿ ಅರ್ಹತೆ ಪಡೆಯುವಲ್ಲಿ ನೇಪಾಳ ಯಶಸ್ವಿಯಾಗಲಿಲ್ಲ.
ಮೇಲೆ ಹೇಳಿದಂತೆ ಈ ಬಾರಿ ಭಾಗವಹಿಸುತ್ತಿರುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವನ್ನು ಹೊರತುಪಡಿಸಿ, ಎ ಗುಂಪಿನಲ್ಲಿ ಓಮನ್, ಪಾಕಿಸ್ತಾನ ಮತ್ತು ಯುಎಇ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಹಾಂಗ್ ಕಾಂಗ್ ಮತ್ತು ಓಮನ್ ತಂಡಗಳಿವೆ. ಎರಡೂ ಗುಂಪುಗಳ ಅಗ್ರ 2 ತಂಡಗಳು ಸೂಪರ್ ಫೋರ್ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಇಲ್ಲಿ ಎಲ್ಲಾ 4 ತಂಡಗಳು ಪರಸ್ಪರ ವಿರುದ್ಧ ಆಡುತ್ತವೆ. ಈ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆಯುವ ಎರಡು ತಂಡಗಳು ಸೆಪ್ಟೆಂಬರ್ 28 ರಂದು ಟೂರ್ನಮೆಂಟ್‌ನ ಫೈನಲ್‌ನಲ್ಲಿ ಟ್ರೋಫಿಗಾಗಿ ಹೋರಾಡಲಿವೆ.
ಹೌದು. ಈ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು. ಆದರೆ, ಭಾರತ ಸರ್ಕಾರದ ಇತ್ತೀಚಿನ ನಿಲುವಿನ ನಂತರ, ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಪಾಕ್ ವಿರುದ್ಧ ಆಡುವುದು ಸ್ಪಷ್ಟವಾಗಿದೆ. ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ಆಡಲು ಸಾಧ್ಯವಿಲ್ಲ. ಆದರೆ ಉಭಯ ತಂಡಗಳು ಬಹು-ರಾಷ್ಟ್ರಗಳ ಪಂದ್ಯಾವಳಿಗಳಲ್ಲಿ ಆಡುಬಹುದು ಎಂದು ಭಾರತ ಸರ್ಕಾರ ಹೇಳಿದೆ.
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಹಣಾಹಣಿ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ. ಆದರೆ, ಅದನ್ನು ಹೊರತುಪಡಿಸಿ, ಎರಡೂ ತಂಡಗಳು ಟೂರ್ನಮೆಂಟ್‌ನಲ್ಲಿ ಇನ್ನೂ ಎರಡು ಬಾರಿ ಮುಖಾಮುಖಿಯಾಗಬಹುದು.. ಎರಡೂ ತಂಡಗಳು ಸೂಪರ್ ಫೋರ್ ಹಂತಕ್ಕೆ ತಲುಪಿದರೆ, ಅಲ್ಲಿ ಎರಡನೇ ಬಾರಿಗೆ ಪಂದ್ಯವನ್ನಾಡಲಿವೆ. ಆ ಬಳಿಕ ಈ ಎರಡೂ ತಂಡಗಳು ಸೂಪರ್ ಸುತ್ತಿನಲ್ಲಿ ಟಾಪ್ 2 ಸ್ಥಾನ ಪಡೆದರೆ, ಆ ನಂತರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅಚ್ಚರಿಯ ಸಂಗತಿಯೆಂದರೆ ಇಲ್ಲಿಯವರೆಗೆ ಏಷ್ಯಾಕಪ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನದ ನಡುವೆ ಫೈನಲ್ ಪಂದ್ಯ ನಡೆದಿಲ್ಲ. ಈ ಬಾರಿಯೂ ಆ ಇತಿಹಾಸ ಮರುಕಳಿಸುತ್ತದಾ ಅಥವಾ ಉಭಯ ತಂಡಗಳು ಮೊದಲ ಬಾರಿಗೆ ಫೈನಲ್ ಆಡುತ್ತವ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Tue, 9 September 25