T20 World Cup 2022: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ್ (India vs Pakistan) ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾಗೆ (Team India) ವಿರಾಟ್ ಕೊಹ್ಲಿ (Virat Kohli) ಭರ್ಜರಿ ಜಯ ತಂದುಕೊಟ್ಟಿದ್ದರು. ಈ ಗೆಲುವಿನ ಮೂಲಕ ಭಾರತೀಯರ ದೀಪಾವಳಿ ಸಂಭ್ರಮವನ್ನು ಹೆಚ್ಚಿಸಿದ್ದರು. ಆದರೆ ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಯನ್ನು ಕಿಚಾಯಿಸುವ ಮೂಲಕ ಪ್ರಮುಖ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ, ಪಂದ್ಯ ಗೆಲ್ಲಿಸಿದಕ್ಕಾಗಿ ವಿರಾಟ್ ಕೊಹ್ಲಿಯವರಿಗೆ ಅಭಿನಂದನೆಗಳು. ಆದರೆ ಈ ಗೆಲುವನ್ನು ಸಂಭ್ರಮಿಸುವುದು ಹೇಗೆ? ಏಕೆಂದರೆ ಪಟಾಕಿ ರಹಿತ ದೀಪಾವಳಿ ಆಚರಿಸಲು ನೀವು ಸಲಹೆ ನೀಡಿದ್ದೀರಿ ಎಂದು ಕಿಚಾಯಿಸಿದ್ದಾರೆ.
ಅಂದರೆ ಈ ಹಿಂದೆ ವಿರಾಟ್ ಕೊಹ್ಲಿ ಯಾವುದೇ ಪಟಾಕಿ ಸಿಡಿಸದೇ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸಿ ಎಂದು ಮನವಿ ಮಾಡಿದ್ದರು. ಅಲ್ಲದೆ ಮಾಲಿನ್ಯ ಮುಕ್ತ ದೀಪಾವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ದೀಪಾವಳಿ ಸಂದರ್ಭದಲ್ಲಿ ಈ ಗೆಲುವನ್ನು ಹೇಗೆ ಸಂಭ್ರಮಿಸಬೇಕೆಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.
Congrats @imVkohli for winning us the match.
But how to celebrate? You have suggested cracker less Dipavali!!?
— Chakravarty Sulibele (@astitvam) October 23, 2022
ಚಕ್ರವರ್ತಿ ಸೂಲಿಬೆಲೆ ಅವರ ಈ ಟ್ವೀಟ್ಗೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಪ್ರತಿಕ್ರಿಯಿಸಿದ್ದಾರೆ.
ದಯವಿಟ್ಟು, ಈಗ ಇದೆಲ್ಲಾ ಬೇಡ. ಇಂತಹ ವಿಷಯಗಳನ್ನು ಇದನ್ನೆಲ್ಲಾ ಬದಿಗಿಟ್ಟು, ಪಾಕಿಸ್ತಾನದ ವಿರುದ್ಧದ ಭಾರತದ ಐತಿಹಾಸಿಕ ಗೆಲುವನ್ನು ಸಂಭ್ರಮಿಸೋಣ ಎಂದು ದೊಡ್ಡ ಗಣೇಶ್ ಪ್ರತಿಕ್ರಿಯಿಸಿದ್ದಾರೆ. ಇತ್ತ ಕರ್ನಾಟಕದ ಮಾಜಿ ಆಟಗಾರನ ಪ್ರತ್ಯುತ್ತರಕ್ಕೂ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
Please ?? Not now. Let’s keep these things aside, and celebrate one of the greatest Indian wins ever, against Pakistan. #KingKohli
— ದೊಡ್ಡ ಗಣೇಶ್ | Dodda Ganesh (@doddaganesha) October 23, 2022
ಸದ್ಯ ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದೆ.
ಟೀಮ್ ಇಂಡಿಯಾಗೆ ರೋಚಕ ಜಯ:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ 160 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 113 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅದರಂತೆ ಅಂತಿಮ 3 ಓವರ್ಗಳ ವೇಳೆ ಪಂದ್ಯವು ರೋಚಕಘಟ್ಟದತ್ತ ಸಾಗಿತ್ತು. ಅದರಂತೆ ಕೊನೆಯ 18 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 48 ರನ್ಗಳ ಅವಶ್ಯಕತೆಯಿತ್ತು. ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ಕೊಹ್ಲಿ ಮೂರು ಭರ್ಜರಿ ಬೌಂಡರಿ ಬಾರಿಸಿದರು. ಅಲ್ಲದೆ ಆ ಓವರ್ನಲ್ಲಿ 17 ರನ್ ಕಲೆಹಾಕಿದರು. ಅಂತಿಮ 12 ಎಸೆತಗಳಲ್ಲಿ 31 ರನ್ ಗಳಿಸಬೇಕಿತ್ತು.
ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನಲ್ಲಿ ಭರ್ಜರಿ 2 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು. ಹಾಗೆಯೇ ಓವರ್ನಲ್ಲಿ 16 ರನ್ಗಳ ಗುರಿಯೊಂದಿಗೆ ಬ್ಯಾಟ್ ಬೀಸಿದ ಕೊಹ್ಲಿ ಬೌಲರ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೊಹಮ್ಮದ್ ನವಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ 2021 ರ ಟಿ20 ವಿಶ್ವಕಪ್ ಸೋಲಿನ ಸೇಡನ್ನು ಟೀಮ್ ಇಂಡಿಯಾ ತೀರಿಸಿಕೊಂಡಿದೆ.