VIDEO: ಮೈದಾನಕ್ಕೆ ನುಗ್ಗಿದ ಹಿಟ್​ಮ್ಯಾನ್ ಅಭಿಮಾನಿ: ತಬ್ಬಿಬ್ಬಾದ ರೋಹಿತ್ ಶರ್ಮಾ

| Updated By: ಝಾಹಿರ್ ಯೂಸುಫ್

Updated on: Jan 21, 2023 | 6:43 PM

India vs New zealand 2nd Odi: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬ್ಯಾಟರ್​ಗಳಿಗೆ ಕ್ರೀಸ್​ ಕಚ್ಚಿ ನಿಲ್ಲಲು ಕೂಡ ಟೀಮ್ ಇಂಡಿಯಾ ವೇಗಿಗಳು ಅವಕಾಶ ನೀಡಲಿಲ್ಲ.

VIDEO: ಮೈದಾನಕ್ಕೆ ನುಗ್ಗಿದ ಹಿಟ್​ಮ್ಯಾನ್ ಅಭಿಮಾನಿ: ತಬ್ಬಿಬ್ಬಾದ ರೋಹಿತ್ ಶರ್ಮಾ
Rohit Sharma Fan
Follow us on

India vs New Zealand 2nd ODI: ರಾಯ್​ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ (Rohit Sharma Fan) ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಪಂದ್ಯದ 10ನೇ ಓವರ್​ ವೇಳೆ ಬಾಲಕನೊಬ್ಬ ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ಆಗಮಿಸಿದ್ದ. ಅಲ್ಲದೆ ನೇರವಾಗಿ ಓಡಿ ಬಂದು ಕ್ರೀಸ್​ನಲ್ಲಿದ್ದ ರೋಹಿತ್ ಶರ್ಮಾರನ್ನು ತಬ್ಬಿಕೊಂಡರು. ಈ ಅನಿರೀಕ್ಷಿತ ಘಟನೆಯಿಂದ ಹಿಟ್​ಮ್ಯಾನ್ ವಿಚಲಿತರಾದರು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿಗಳು ಬಾಲಕನನ್ನು ವಶಕ್ಕೆ ಪಡೆದರು. ಅಲ್ಲದೆ ಎಳೆದುಕೊಂಡು ಹೋಗುವಾಗ ಆತನಿಗೆ ನೋವು ಮಾಡದಂತೆ ರೋಹಿತ್ ಶರ್ಮಾ ಸೂಚಿಸಿರುವುದು ಎಲ್ಲರ ಗಮನ ಸೆಳೆಯಿತು. ಇದೀಗ ಹಿಟ್​ಮ್ಯಾನ್ ಅಭಿಮಾನಿಯ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬ್ಯಾಟರ್​ಗಳಿಗೆ ಕ್ರೀಸ್​ ಕಚ್ಚಿ ನಿಲ್ಲಲು ಕೂಡ ಟೀಮ್ ಇಂಡಿಯಾ ವೇಗಿಗಳು ಅವಕಾಶ ನೀಡಲಿಲ್ಲ. ಪರಿಣಾಮ ಕೇವಲ 15 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದಾಗ್ಯೂ ಕಿವೀಸ್ ತಂಡದ ಭರವಸೆ ಮೈಕೆಲ್ ಬ್ರೇಸ್​ವೆಲ್ ಮೇಲಿತ್ತು. ಆದರೆ 22 ರನ್​ಗಳಿಸಿದ್ದ ಬೇಸ್​ವೆಲ್ ರನ್ನು ಔಟ್ ಮಾಡುವಲ್ಲಿ ಶಮಿ ಯಶಸ್ವಿಯಾದರು. ಇದಾಗ್ಯೂ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್​ ಮಧ್ಯಮ ಕ್ರಮಾಂಕದಲ್ಲಿ 47 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ನ್ಯೂಜಿಲೆಂಡ್ ಮೊತ್ತವು 100ರ ಗಡಿದಾಟಿತು.

ಈ ಹಂತದಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಮಿಚೆಲ್ ಸ್ಯಾಂಟ್ನರ್ (27) ರನ್ನು ಬೌಲ್ಡ್ ಮಾಡಿದರು. ಮತ್ತೊಂದೆಡೆ ಸ್ಪಿನ್ ಮೋಡಿ ಮಾಡಿದ ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ಗ್ಲೆನ್ ಫಿಲಿಪ್ಸ್ (36) ಹಾಗೂ ಲಾಕಿ ಫರ್ಗುಸನ್ ವಿಕೆಟ್ ಕಬಳಿಸಿದರು. ಇನ್ನು ಟಿಕ್ನರ್ ಅವರನ್ನು ಎಲ್​ಬಿ ಬಲೆಗೆ ಬೀಳಿಸುವ ಮೂಲಕ ಕುಲ್ದೀಪ್ ಯಾದವ್ ಅಂತಿಮ ವಿಕೆಟ್ ಪಡೆದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು 34.3 ಓವರ್​ಗಳಲ್ಲಿ ಕೇವಲ 108 ರನ್​ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 6 ಓವರ್​ನಲ್ಲಿ 18 ರನ್​ ನೀಡಿ 3 ವಿಕೆಟ್ ಪಡೆದರೆ, ಸಿರಾಜ್ ಹಾಗೂ ಸುಂದರ್ ತಲಾ 2 ವಿಕೆಟ್ ಕಬಳಿಸಿದರು.

109 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್​ಮ್ಯಾನ್ ಸಿಕ್ಸ್ ಫೋರ್​ಗಳ ಸುರಿಮಳೆಗೈದರು. ಪರಿಣಾಮ 10ನೇ ಓವರ್​ನಲ್ಲೇ ಟೀಮ್ ಇಂಡಿಯಾ ಮೊತ್ತ 50ರ ಗಡಿದಾಟಿತು. ಅಲ್ಲದೆ 47 ಎಸೆತಗಳಲ್ಲಿ ರೋಹಿತ್ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ಹಾಫ್​ ಸೆಂಚುರಿ ಬೆನ್ನಲ್ಲೇ ಹಿಟ್​ಮ್ಯಾನ್ (51) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

ಆ ಬಳಿಕ ಬಂದ ವಿರಾಟ್ ಕೊಹ್ಲಿ 11 ರನ್​ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್​ ಔಟಾದರು. ಇನ್ನು ಇಶಾನ್ ಕಿಶನ್ ಜತೆಗೂಡಿ ಅಜೇಯ 40 ರನ್​ ಬಾರಿಸಿದ ಶುಭ್​ಮನ್ ಗಿಲ್ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಟೀಮ್ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಭಾರತ ತಂಡವು ವಶಪಡಿಸಿಕೊಂಡಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

 

 

 

Published On - 6:40 pm, Sat, 21 January 23