
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ್ ಸೆಹ್ವಾಗ್, ಇದೀಗ ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಭಾರತದ ಅಂಡರ್-19 ತಂಡ ಏಷ್ಯಾಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಮಗನ ಸಾಧನೆಗೆ ಇದೀಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಕುಟುಂಬದ ಹೆಸರಿನೊಂದಿಗೆ ಬರುವ ಟೀಕೆಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಮೈದಾನದಲ್ಲಿ ದೊಡ್ಡ ಮೊತ್ತದ ರನ್ ಗಳಿಸುವ ಮೂಲಕ ಆರ್ಯವೀರ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಆರ್ಯವೀರ್ 361 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿದ್ದವು. ಅಲ್ಲದೆ, ಪಾಕಿಸ್ತಾನ ವಿರುದ್ಧದ ಮಹತ್ವದ ಫೈನಲ್ ಪಂದ್ಯದಲ್ಲೂ 58 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು.
ಈ ಬಗ್ಗೆ ಮಾತನಾಡಿರುವ ಸೆಹ್ವಾಗ್, ‘ಭಾರತದ ಅಂಡರ್-19 ತಂಡ ಏಷ್ಯಾಕಪ್ ಗೆದ್ದಿರುವುದು ನನಗೆ ತುಂಬಾ ಸಂತಸ ತಂದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಯವೀರ್ ನೀಡಿದ ಕೊಡುಗೆ ವಿಶೇಷವಾದದ್ದು. ಆತ ಕೇವಲ ರನ್ ಗಳಿಸಲಿಲ್ಲ, ದೊಡ್ಡ ಮೊತ್ತದ ರನ್ ಗಳಿಸಿದ. ಈ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಯಾವಾಗಲೂ ಆತನಿಗೆ ಒಂದು ಮಾತು ಹೇಳುತ್ತಿದ್ದೆ. ನಿನಗೆ ಗೌರವ ಸಿಗಬೇಕಾದರೆ ದೊಡ್ಡ ಮೊತ್ತದ ರನ್ ಗಳಿಸಬೇಕು ಎಂದು ಹೇಳುತ್ತಿದ್ದೆ. ಈ ಟೂರ್ನಿಯಲ್ಲಿ ಆತ ಅದನ್ನೇ ಮಾಡಿ ತೋರಿಸಿದ್ದಾನೆ.
‘ಒಬ್ಬ ಆಟಗಾರನ ಆಟವನ್ನು ಕಣ್ಣಾರೆ ನೋಡುವವರೆಗೂ ಜನರು ಆತನ ಹೆಸರಿನ ಆಧಾರದ ಮೇಲೆಯೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಆತ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಪ್ರತಿಭೆಯನ್ನು ಗುರುತಿಸುತ್ತಾರೆ. ಆರ್ಯವೀರ್ ಕೂಡ ತನ್ನ ತಂದೆಯ ಹೆಸರಿನಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಮುಂದೆಯೂ ಇಂತಹ ಟೀಕೆಗಳು ಎದುರಾಗಬಹುದು. ಆದರೆ, ಈಗ ಆತನಲ್ಲಿ ಪ್ರತಿಭೆಯಿದೆ ಮತ್ತು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದ ಜನರಿಂದ ಆತನಿಗೆ ಪ್ರೀತಿ ಮತ್ತು ಬೆಂಬಲ ಸಿಗಲಿದೆ ಎಂಬ ವಿಶ್ವಾಸ ನನಗಿದೆ’ ಎಂದು ಸೆಹ್ವಾಗ್ ಹೇಳಿದ್ದಾರೆ.