
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿರುವ ಅಜಿತ್ ಅಗರ್ಕರ್ ಅವರ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದ್ದು, ಅವರು ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಅಕ್ಟೋಬರ್ 4, 2026 ರಂದು ಅಗರ್ಕರ್ ಅವರ ಪ್ರಸ್ತುತ ಒಪ್ಪಂದ ಮುಕ್ತಾಯವಾಗಲಿದ್ದು, ಆ ಬಳಿಕ ಈ ಮಹತ್ವದ ಹುದ್ದೆ ಅಧಿಕೃತವಾಗಿ ತೆರವಾಗಲಿದೆ. ತಾವು ಈ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಮತ್ತು ಒಪ್ಪಂದದ ವಿಸ್ತರಣೆಯನ್ನು ಬಯಸುವುದಿಲ್ಲ ಎಂದು ಅಗರ್ಕರ್ ಈಗಾಗಲೇ ಮಂಡಳಿಗೆ ತಿಳಿಸಿದ್ದಾರೆ.
ಜುಲೈ 2023 ರಲ್ಲಿ ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡ ಅಜಿತ್ ಅಗರ್ಕರ್ ಅವರ ಅವಧಿಯು ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಯಶಸ್ವಿಯಾಗಿತ್ತು. ಇವರ ಮಾರ್ಗದರ್ಶನದ ಆಯ್ಕೆ ಸಮಿತಿಯ ಅವಧಿಯಲ್ಲಿ ಭಾರತ ತಂಡವು ಎರಡು ಪ್ರಮುಖ ಐಸಿಸಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತು…
ಮೇಲ್ನೋಟಕ್ಕೆ ಒಪ್ಪಂದದ ಅವಧಿ ಮುಕ್ತಾಯ ಎಂದು ಹೇಳಲಾಗುತ್ತಿದ್ದರೂ, ಬಿಸಿಸಿಐ ಆಡಳಿತ ಮಂಡಳಿ ಮತ್ತು ಅಜಿತ್ ಅಗರ್ಕರ್ ನಡುವಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳೇ ಈ ನಿರ್ಧಾರಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ.
ರೋಹಿತ್ ಶರ್ಮಾ ಭವಿಷ್ಯದ ಕುರಿತು ಭಿನ್ನಾಭಿಪ್ರಾಯ: ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಏಕದಿನ ಪಂದ್ಯದ ನಂತರ, ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಒನ್-ಡೇ ಫಾರ್ಮ್ಯಾಟ್‌ನಿಂದ ಮುಕ್ತಗೊಳಿಸಿ ಹೊಸಬರಿಗೆ ಮಣೆ ಹಾಕಲು ಆಯ್ಕೆ ಸಮಿತಿ ಯೋಜಿಸಿತ್ತು. ಆದರೆ ಬಿಸಿಸಿಐನ ಹಿರಿಯ ಅಧಿಕಾರಿಗಳು 2027ರ ಏಕದಿನ ವಿಶ್ವಕಪ್‌ವರೆಗೂ ರೋಹಿತ್ ಅವರನ್ನೇ ಬೆಂಬಲಿಸಲು ನಿರ್ಧರಿಸಿದರು. ಇದು ಆಯ್ಕೆ ಸಮಿತಿಯ ಸ್ವಾಯತ್ತತೆಗೆ ಧಕ್ಕೆ ತಂದಿತು ಎನ್ನಲಾಗಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಜೊತೆಗಿನ ಕಿರಿಕಿರಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಅಗರ್ಕರ್ ನಡುವೆ ಆಟಗಾರರ ಕೆಲಸದ ನಿರ್ವಹಣೆ, ಗಾಯದ ಅಪ್‌ಡೇಟ್‌ಗಳು ಮತ್ತು ಇಂಡಿಯಾ ‘ಎ’ ತಂಡದ ವೇಳಾಪಟ್ಟಿಗಳ ವಿಷಯದಲ್ಲಿ ಒಮ್ಮತ ಇರಲಿಲ್ಲ ಎಂದು ವರದಿಗಳು ಹೇಳಿವೆ. ಈ ಕಾರಣಗಳಿಂದಾಗಿ ಅಜಿತ್ ಅಗರ್ಕರ್ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ನಲ್ಲಿ ‘ಸ್ಟಾಪ್ ಕ್ಲಾಕ್’ ನಿಯಮ!
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಸದ್ಯ ಇಬ್ಬರ ಹೆಸರು ಕೇಳಿ ಬರುತ್ತಿದೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್. ಹಾಗೆಯೇ ಭಾರತ ತಂಡದ ಮಾಜಿ ವೇಗಿ ಪ್ರಗ್ಯಾನ್ ಓಜಾ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ಇಬ್ಬರಲ್ಲಿ ಒಬ್ಬರು ಆಯ್ಕೆ ಸಮಿತಿ ಮುಖ್ಯಸ್ಥಾನ ಸ್ಥಾನದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.