ನಾವೆಲ್ಲಾ ಸೇರಿನೇ ಕಳ್ಳಾಟ ಆಡಿದ್ದು: ಆಸ್ಟ್ರೇಲಿಯಾದ ಮೋಸದಾಟ ಬಯಲು!

ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿದ್ದ 2018ರ 'ಸ್ಯಾಂಡ್‌ಪೇಪರ್ ಗೇಟ್' ಹಗರಣದ ಅಸಲಿ ಮುಖವಾಡವನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಉಸ್ಮಾನ್ ಖ್ವಾಜಾ ಈಗ ಸಂಪೂರ್ಣವಾಗಿ ಕಳಚಿ ಬಿಚ್ಚಿಟ್ಟಿದ್ದಾರೆ. ಅಂದು ಕೇವಲ ಮೂವರು ಆಟಗಾರರ ಮೇಲೆ ಗೂಬೆ ಕೂರಿಸಿ ಪ್ರಕರಣವನ್ನು ಹಳ್ಳ ಹಿಡಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾದ ಕಣ್ಣೊರೆಸ ತಂತ್ರವನ್ನು ಖ್ವಾಜಾ ಅವರ ಒಂದು ಹೇಳಿಕೆ ಧೂಳೀಪಟ ಮಾಡಿದೆ.

ನಾವೆಲ್ಲಾ ಸೇರಿನೇ ಕಳ್ಳಾಟ ಆಡಿದ್ದು: ಆಸ್ಟ್ರೇಲಿಯಾದ ಮೋಸದಾಟ ಬಯಲು!
Australia
Image Credit source: GettyImages

Updated on: Nov 07, 2026 | 9:57 AM

ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ಅತ್ಯಂತ ಕಪ್ಪು ಚುಕ್ಕೆ ಎಂದೇ ಪರಿಗಣಿಸಲ್ಪಟ್ಟಿರುವ 2018ರ ‘ಸ್ಯಾಂಡ್‌ಪೇಪರ್ ಗೇಟ್’ (ಚೆಂಡು ವಿರೂಪಗೊಳಿಸಿದ ವಿವಾದ) ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ಅವರು ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಹೊಸ ಆತ್ಮಕಥನವಾದ ‘ಸಬ್ರ್’ ಪುಸ್ತಕದ ಆಯ್ದ ಭಾಗಗಳಲ್ಲಿ ಖ್ವಾಜಾ ನೀಡಿರುವ ಹೇಳಿಕೆಗಳು ಜಾಗತಿಕ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

“ಚೆಂಡನ್ನು ವಿರೂಪಗೊಳಿಸುವ ಸಂಚಿನಲ್ಲಿ ಕೇವಲ ಮೂವರು ಮಾತ್ರ ಭಾಗಿಯಾಗಿದ್ದರು” ಎಂಬ ಕ್ರಿಕೆಟ್ ಆಸ್ಟ್ರೇಲಿಯಾದ ಇದುವರೆಗಿನ ಅಧಿಕೃತ ತನಿಖೆಯ ವರದಿಯನ್ನು ಖ್ವಾಜಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

Loading...

ನೈನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು, “ಆ ವಿವಾದದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವು. ಬ್ಯಾಟರ್‌ಗಳಲ್ಲ, ಬೌಲರ್‌ಗಳಲ್ಲ, ಸಿಬ್ಬಂದಿಗಳೂ ಅಲ್ಲ… ನಮ್ಮ ಇಡೀ ತಂಡವೇ ಅದರಲ್ಲಿ ಶಾಮೀಲಾಗಿತ್ತು” ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.

ಖ್ವಾಜಾ ಬಹಿರಂಗಡಪಡಿಸಿದ ಸತ್ಯಗಳು:

  •  ಕ್ರಿಕೆಟ್ ಆಸ್ಟ್ರೇಲಿಯಾವು ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಅವರ ಮೇಲೆ ಮಾತ್ರ ತಪ್ಪು ಹೊರಿಸಿ ದೀರ್ಘಾವಧಿಯ ನಿಷೇಧ ಹೇರಿತ್ತು. ಆದರೆ, ಆ ಸರಣಿಯಲ್ಲಿದ್ದ ಇಡೀ ತಂಡಕ್ಕೆ ಈ ಕೃತ್ಯದ ಅರಿವಿತ್ತು ಎಂದು ಖ್ವಾಜಾ ಸ್ಪಷ್ಟಪಡಿಸಿದ್ದಾರೆ.
  • ಸ್ಯಾಂಡ್‌ಪೇಪರ್ ಅನ್ನು ಕೇವಲ ಕೇಪ್ ಟೌನ್ ಟೆಸ್ಟ್‌ನಲ್ಲಿ ಮಾತ್ರ ಬಳಸಲಾಗಿರಲಿಲ್ಲ. ಅದಕ್ಕೂ ಮುನ್ನ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಚೆಂಡನ್ನು ಹೇಗೆ ವಿರೂಪಗೊಳಿಸಬೇಕು ಎಂಬ ಬಗ್ಗೆ ಬಹಿರಂಗವಾಗಿ ಚರ್ಚೆಗಳು ನಡೆದಿದ್ದವು ಮತ್ತು ಆ ಪಂದ್ಯದಲ್ಲೂ ಸ್ಯಾಂಡ್‌ಪೇಪರ್ ಬಳಸಲಾಗಿತ್ತು ಎಂದು ಖ್ವಾಜಾ ಬಹಿರಂಗಪಡಿಸಿದ್ದಾರೆ.
  • ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ಅಡ್ಡದಾರಿಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಅಂದಿನ ನಾಯಕ ಸ್ಟೀವ್ ಸ್ಮಿತ್ ತಮ್ಮ ಕೈಗಳನ್ನು ಮೇಲಕ್ಕೆತ್ತಿ ಅಲ್ಲಿಂದ ಹೊರನಡೆದಿದ್ದರು. ಅಂದರೆ, ಅಲ್ಲಿ ಏನು ನಡೆಯುತ್ತಿದೆ ಎಂಬ ವಿವರ ತಮಗೆ ತಿಳಿಯುವುದು ಬೇಡ ಎಂಬಂತೆ ಅವರು ವರ್ತಿಸಿದ್ದರು ಎಂದು ಖ್ವಾಜಾ ತಿಳಿಸಿದ್ದಾರೆ.
  • ಆ ಸಮಯದಲ್ಲಿ ಕೇಪ್ ಟೌನ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಬ್ಯಾನ್‌ಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದರೂ ಸಹ, ಕ್ರಿಕೆಟ್ ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ತನ್ನನ್ನು ಒಮ್ಮೆಯೂ ವಿಚಾರಣೆಗೆ ಒಳಪಡಿಸಲಿಲ್ಲ ಎಂದು ಉಸ್ಮಾನ್ ಖ್ವಾಜಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
  • ಇಡೀ ತಂಡವೇ ಜವಾಬ್ದಾರಿ ಹೊರಬೇಕೆಂದು ತಾನು ಹೇಳಬಹುದು ಎಂಬ ಭಯದಿಂದಲೇ ಅಧಿಕಾರಿಗಳು ತನ್ನನ್ನು ವಿಚಾರಣೆ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಉಸ್ಮಾನ್ ಖ್ವಾಜಾ ಅವರ ಈ ಸ್ಫೋಟಕ ಹೇಳಿಕೆಯು 2021 ರಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್​ವುಡ್ ಮತ್ತು ನಾಥನ್ ಲಿಯಾನ್ ನೀಡಿದ್ದ ಜಂಟಿ ಹೇಳಿಕೆಗೆ ತದ್ವಿರುದ್ಧವಾಗಿದೆ. ಅಂದು ಬೌಲರ್‌ಗಳು ತಮಗೆ ಈ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ಪ್ರಮಾಣೀಕರಿಸಿದ್ದರು. ಆದರೆ ಖ್ವಾಜಾ ಈಗ “ನಾವೆಲ್ಲರೂ ಇದ್ದೆವು” ಎಂದು ಹೇಳುವ ಮೂಲಕ ಇಡೀ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತೆ ಮಾಡಿದ್ದಾರೆ.

ಏನಿದು ಪ್ರಕರಣ?

‘ಸ್ಯಾಂಡ್‌ಪೇಪರ್ ಗೇಟ್’ ಎಂಬುದು 2018 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ನಡೆದ ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ‘ಚೆಂಡು ವಿರೂಪಗೊಳಿಸಿದ’ ಹಗರಣವಾಗಿದೆ. ಪಂದ್ಯದ ಮಧ್ಯೆ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಜೇಬಿನಿಂದ ಹಳದಿ ಬಣ್ಣದ ಉಜ್ಜು ಕಾಗದವನ್ನು (ಸ್ಯಾಂಡ್ ಪೇಪರ್) ತೆಗೆದು, ಚೆಂಡನ್ನು  ಸ್ವಿಂಗ್ ಮಾಡುವ ಉದ್ದೇಶದಿಂದ ಉಜ್ಜುತ್ತಿದ್ದುದು ಲೈವ್ ಟಿವಿ ಕ್ಯಾಮೆರಾಗಳಲ್ಲಿ ಸಿಕ್ಕಿಬಿದ್ದಿತ್ತು.

Sandpaper Incident by Australian team #cricket #sports #viral

ಈ ಕಳ್ಳಾಟ ಬಯಲಾದಾಗ ಜಾಗತಿಕವಾಗಿ ತೀವ್ರ ಮುಖಭಂಗ ಅನುಭವಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು, ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ಒಂದು ವರ್ಷ ಹಾಗೂ ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ಕಾಲ ನಿಷೇಧ ಹೇರಿತ್ತು. ಆಗಿನ ತನಿಖೆಯಲ್ಲಿ “ಈ ಸಂಚು ಕೇವಲ ಆ ಮೂವರಿಗೆ ಮಾತ್ರ ತಿಳಿದಿತ್ತು” ಎಂದು ಪ್ರಕರಣ ಮುಚ್ಚಿಹಾಕಲಾಗಿತ್ತಾದರೂ, ಈಗ ಉಸ್ಮಾನ್ ಖ್ವಾಜಾ ಅವರು “ಅದರಲ್ಲಿ ಇಡೀ ತಂಡವೇ ಶಾಮೀಲಾಗಿತ್ತು” ಎಂದು ಸ್ಫೋಟಕ ಸತ್ಯ ಬಯಲು ಮಾಡುವ ಮೂಲಕ ಈ ಹಳೇ ವಿವಾದವನ್ನು ಮತ್ತೆ ಕೆದಕಿದ್ದಾರೆ.

ಇದನ್ನೂ ಓದಿ: ಭರ್ಜರಿ ಸೆಂಚುರಿ… ಮತ್ತೆ ಅಬ್ಬರಿಸಿದ ಯಶಸ್ವಿ ಜೈಸ್ವಾಲ್

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಘನತೆಗೆ ಮಸಿ ಬಳಿದಿದ್ದ ‘ಸ್ಯಾಂಡ್‌ಪೇಪರ್ ಗೇಟ್’ ವಿವಾದವನ್ನು ಕ್ರಿಕೆಟ್ ಮಂಡಳಿಯು ಕೇವಲ ಮೂವರ ತಲೆಗೆ ಕಟ್ಟಿ ಕೈತೊಳೆದುಕೊಂಡಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ಉಸ್ಮಾನ್ ಖ್ವಾಜಾ ಅವರ ಈ ದಂಗುಬಡಿಸುವ ಬಹಿರಂಗಪಡಿಸುವಿಕೆಯು, ಅಂದು ಆಸ್ಟ್ರೇಲಿಯಾ ತಂಡವು ಜಂಟಿಯಾಗಿ ಮಾಡಿದ ತಪ್ಪನ್ನು ಮುಚ್ಚಿಹಾಕಲು ಕ್ರಿಕೆಟ್ ಆಸ್ಟ್ರೇಲಿಯಾ ವ್ಯವಸ್ಥಿತವಾಗಿ ಕಣ್ಣೊರೆಸ ತಂತ್ರ ನಡೆಸಿತ್ತು ಎಂಬುದನ್ನು ಸಾಬೀತುಪಡಿಸಿದೆ. ಈ ಸ್ಫೋಟಕ ಸತ್ಯವು ಕೇವಲ ಆಸ್ಟ್ರೇಲಿಯಾ ಕ್ರಿಕೆಟ್‌ನ ಸುಳ್ಳನ್ನು ಬಯಲು ಮಾಡಿಲ್ಲ, ಬದಲಿಗೆ ಕ್ರೀಡಾ ಜಗತ್ತಿನಲ್ಲಿ ‘ದಾಖಲೆಗಳು ಮತ್ತು ತನಿಖೆಗಳು’ ಹೇಗೆ ಸತ್ಯವನ್ನು ಮರೆಮಾಚಬಲ್ಲವು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿ ಇತಿಹಾಸದ ಪುಟ ಸೇರಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us