
ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಇದೇ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೇರಿದ್ದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿ 15ನೇ ಬಾರಿಗೆ ಫೈನಲ್ ತಲುಪಿದ್ದ ಕರ್ನಾಟಕ ತಂಡ ತವರು ನೆಲದ ಪ್ರಯೋಜನ ಪಡೆದು ಸುಲಭವಾಗಿ ಜಮ್ಮುಕಾಶ್ಮೀರ ತಂಡವನ್ನು ಮಣಿಸುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಇದಕ್ಕೆ ಪೂರಕವಾಗಿ ಕರ್ನಾಟಕ ತಂಡ ಘಟಾನುಘಟಿಗಳಿಂದಲೇ ತುಂಬಿ ತುಳುಕುತ್ತಿತ್ತು. ತಂಡದಲ್ಲಿ ಅನುಭವಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ರಂತಹ ಬ್ಯಾಟ್ಸ್ಮನ್ಗಳಿದ್ದರೆ, ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ರಂತಹ ಪ್ರತಿಭಾವಂತ ಬೌಲರ್ಗಳಿದ್ದರು. ಆದಾಗ್ಯೂ ಪಂದ್ಯ ಆರಂಭವಾದ ಮೊದಲ ದಿನದಿಂದಲೂ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಜೆಕೆ ತಂಡ ಕೊನೆಯವರೆಗೂ ಕರ್ನಾಟಕ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಒಂದೇ ಒಂದು ಅವಕಾಶವನ್ನು ಬಿಟ್ಟುಕೊಡಲಿಲ್ಲ.
ಜೆಕೆ ತಂಡ 1959-60ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿತ್ತು. ಅಂದರೆ ಬರೋಬ್ಬರಿ 67 ವರ್ಷಗಳಿಂದ ರಣಜಿ ಅಂಗಳದಲ್ಲಿ ಕಾಣಿಸಿಕೊಂಡಿರುವ ಜೆಕೆ ತಂಡಕ್ಕೆ ಇಲ್ಲಿಯವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೀಗ ಬಲಿಷ್ಠ ತಂಡಗಳನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ತಂಡವನ್ನು ವಿಜಯಿ ಎಂದು ಘೋಷಿಸಲಾಗಿದ್ದು, 67 ವರ್ಷಗಳ ಪ್ರಶಸ್ತಿ ಬರವನ್ನು ಐತಿಹಾಸಿಕವಾಗಿ ಅಂತ್ಯಗೊಳಿಸಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಕರ್ನಾಟಕ ಕೇವಲ 293 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಇತ್ತ ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜಮ್ಮುಕಾಶ್ಮೀರದ ಬ್ಯಾಟ್ಸ್ಮನ್ಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭಿಕ ಕಮ್ರಾನ್ ಇಕ್ಬಾಲ್ 160 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ ಸಾಹಿಲ್ ಕೂಡ ಶತಕ ಬಾರಿಸಿದರು. ಇವರಿಬ್ಬರ ಶತಕದಿಂದಾಗಿ ಜೆಕೆ ತಂಡದ ಒಟ್ಟು ಮುನ್ನಡೆ 630 ರನ್‌ಗಳನ್ನು ಮೀರಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.
ನಿಯಮಗಳ ಪ್ರಕಾರ, ರಣಜಿ ಟ್ರೋಫಿಯಲ್ಲಿ ಪಂದ್ಯ ರದ್ದಾದರೆ, ಮೊದಲ ಇನ್ನಿಂಗ್ಸ್ ಆಧರಿಸಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಈ ನಿಯಮದನ್ವಯ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು. ಮೇಲೆ ಹೇಳಿದಂತೆ ಜಮ್ಮು ಮತ್ತು ಕಾಶ್ಮೀರ ತಂಡ ಫೈನಲ್‌ಗೆ ತಲುಪಿ ಟ್ರೋಫಿಯನ್ನು ಗೆದ್ದಿದ್ದು ಇದೇ ಮೊದಲು. ಹೀಗಾಗಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಆಟಗಾರರನ್ನು ಭೇಟಿಯಾಗಿ ಅಭಿನಂದಿಸಿ, ಈ ಸಾಧನೆಯು ಭವಿಷ್ಯದ ಪೀಳಿಗೆಗಳು ಕ್ರೀಡೆಯನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿ ನೀಡುತ್ತದೆ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sat, 28 February 26