
ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy) ಗೋವಾ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಜುನ್ ಮೂರು ವಿಕೆಟ್ ಕಬಳಿಸಿದರು. ಪವರ್‌ಪ್ಲೇನಲ್ಲಿಯೇ ತಮ್ಮ ಬೌಲಿಂಗ್ ಮ್ಯಾಜಿಕ್ ತೋರಿದ ಅರ್ಜುನ್ ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಇದರ ಫಲವಾಗಿ ಗೋವಾ ತಂಡ ಮಧ್ಯಪ್ರದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿ ತನ್ನ ಎರಡನೇ ಗೆಲುವುನ್ನು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ 170 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗೋವಾ 18.3 ಓವರ್‌ಗಳಲ್ಲಿ ಜಯದ ನಗೆ ಬೀರಿತು. ತಂಡದ ಪರ ನಾಯಕ ಸುಯಾಶ್ ಪ್ರಭುದೇಸಾಯಿ ಅಜೇಯ 75 ರನ್ ಬಾರಿಸಿದರೆ, ಅಭಿನವ್ ತೇಜ್ರಾನಾ 55 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಬೌಲಿಂಗ್ನಲ್ಲಿ 3 ವಿಕೆಟ್ ಉರುಳಿಸಿದ ಅರ್ಜುನ್ ತೆಂಡೂಲ್ಕರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಗೋವಾ ಪರ ಮೊದಲ ಓವರ್ ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ , ಐದನೇ ಎಸೆತದಲ್ಲಿ ಶಿವಾಂಗ್ ಕುಮಾರ್ ಅವರನ್ನು ಔಟ್ ಮಾಡಿದರು. ಶಿವಾಂಗ್ ತಮ್ಮ ಖಾತೆಯನ್ನು ತೆರೆಯಲೂ ವಿಫಲರಾದರು. ನಂತರ ಮುಂದಿನ ಓವರ್‌ನಲ್ಲಿ ಅಂಕುಶ್ ಸಿಂಗ್ ಅವರನ್ನು ಔಟ್ ಮಾಡಿದರು. ಡೆತ್ ಓವರ್‌ಗಳಲ್ಲಿ ಅರ್ಜುನ್ ಸ್ವಲ್ಪ ದುಬಾರಿಯಾದರೂ, ಪ್ರಮುಖ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಅವರನ್ನು ಕೇವಲ 6 ರನ್‌ಗೆ ಪೆವಿಲಿಯನ್ಗಟ್ಟಿದರು ಇದು ಅವರ ಮೂರನೇ ವಿಕೆಟ್ ಆಗಿತ್ತು. ಮಧ್ಯಪ್ರದೇಶ ಪರ ಹರ್‌ಪ್ರೀತ್ ಸಿಂಗ್ ಅಜೇಯ 80 ರನ್ ಬಾರಿಸಿದರೆ, ನಾಯಕ ರಜತ್ ಪತಿದಾರ್ ಕೇವಲ 29 ರನ್ ಗಳಿಸಿದರು. ಕೊನೆಯಲ್ಲಿ, ಅಂಕಿತ್ ವರ್ಮಾ ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ 34 ರನ್ ಸಿಡಿಸಿದರು.
ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಕರ್ನಾಟಕವನ್ನು ಕಾಡಿದ ಅರ್ಜುನ್ ತೆಂಡೂಲ್ಕರ್
ತಂಡದ ಪರ ಬೌಲಿಂಗ್ ಆರಂಭಿಸಿದ್ದ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ನಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬಂದ ತಕ್ಷಣವೇ ಮೂರು ಬೌಂಡರಿ ಬಾರಿಸಿದ ಅರ್ಜುನ್ 16 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಅಭಿನವ್ ತಲ್ರೇಜಾ ಮತ್ತು ಸುಯೇದ್ ಪ್ರಭುದೇಸಾಯಿ ಇಬ್ಬರೂ 66 ಎಸೆತಗಳಲ್ಲಿ 89 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಲಲಿತ್ ಯಾದವ್ ಕೂಡ ಪ್ರಭುದೇಸಾಯಿ ಅವರೊಂದಿಗೆ ಕೇವಲ 27 ಎಸೆತಗಳಲ್ಲಿ 57 ರನ್‌ಗಳನ್ನು ಸೇರಿಸಿ ತಂಡದ ಗೆಲುವಿಗೆ ಸಹಾಯ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ