ಓಯ್ ಅಂಧೇರೇ… ತಿಲಕ್ ವರ್ಮಾಗೆ ಅರ್ಷದೀಪ್ ನಿಂದನೆ! ಭಾರೀ ಆಕ್ರೋಶ

IPL 2026: ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ಮೈಬಣ್ಣವನ್ನು ಹೀಯಾಳಿಸಿ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಆಡಿರುವ ಮಾತುಗಳು ಈಗ ಐಪಿಎಲ್ ಕ್ರಿಕೆಟ್ ಲೋಕದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಸ್ನ್ಯಾಪ್‌ಚಾಟ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ತಿಲಕ್ ಅವರನ್ನು ‘ಓಯ್ ಅಂಧೇರೇ’ ಎಂದು ಕರೆದಿರುವ ಅರ್ಷದೀಪ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ತೀವ್ರ ಜನಾಂಗೀಯ ಹಾಗೂ ವರ್ಣಭೇದದ ಆಕ್ರೋಶ ವ್ಯಕ್ತವಾಗುತ್ತಿದೆ.

ಓಯ್ ಅಂಧೇರೇ... ತಿಲಕ್ ವರ್ಮಾಗೆ ಅರ್ಷದೀಪ್ ನಿಂದನೆ! ಭಾರೀ ಆಕ್ರೋಶ
Tilak Varma - Arshdeep Singh

Updated on: May 16, 2026 | 9:35 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ವಿವಾದಗಳು ಮುಂದುವರೆದಿದೆ. ಈ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ ಅರ್ಷದೀಪ್ ಸಿಂಗ್ ಅವರ ವರ್ಣಭೇದ/ಜನಾಂಗೀಯ ನಿಂದನೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಅವರನ್ನು ಮೈ ಬಣ್ಣವನ್ನು ಪ್ರಸ್ತಾಪಿಸಿ ಕರೆಯುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲೇನಿದೆ?

ಅರ್ಷದೀಪ್ ಸಿಂಗ್ ತಮ್ಮದೇ ಆದ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ, “ಓಯ್ ಅಂಧೇರೇ (ಕತ್ತಲೆಯೇ), ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ?” ಎಂದು ಕೇಳಿದ್ದಾರೆ.

ಅಷ್ಟೇ ಅಲ್ಲದೆ ಕ್ಯಾಮೆರಾವನ್ನು ಸಹ ಆಟಗಾರ ನಮನ್ ಧೀರ್ ಕಡೆಗೆ ತಿರುಗಿಸಿ, ಅವರೇ ಪಂಜಾಬ್‌ನ ನಿಜವಾದ ‘ನೂರ್’ (ಕಾಂತಿ) ಎಂದು ಹೊಗಳಿದ್ದಾರೆ.

ಇಲ್ಲಿ ಅರ್ಷದೀಪ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಅಂಧೇರೇ ಅಂದಿರುವುದು ಕರಿಯ ಎಂಬಾರ್ಥದಲ್ಲಿ. ಅಂದರೆ ಮೈ ಬಣ್ಣವನ್ನು ಪ್ರಸ್ತಾಪಿಸಿ ಹೀಯಾಳಿಸಿರುವುದು ಸ್ಪಷ್ಟ.

ಅರ್ಷದೀಪ್ ಸಿಂಗ್ ಅವರ  ಈ ಮಾತಿನಿಂದ ತಿಲಕ್ ವರ್ಮಾ ಮುಜುಗರಕ್ಕೊಳಗಾದಂತೆ ಕಂಡರೂ, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಾರೆ. “ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.

ನೆಟ್ಟಿಗರ ತೀವ್ರ ಆಕ್ರೋಶ:

ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಅರ್ಷದೀಪ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ತಮಾಷೆಯ ಹೆಸರಿನಲ್ಲಿ ಇಂತಹ ವರ್ಣಭೇದದ ಕಾಮೆಂಟ್‌ಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಟಗಾರರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತರಬೇತಿ ನೀಡಬೇಕು ಮತ್ತು ಬಿಸಿಸಿಐ ಅರ್ಷದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬ್ಯಾಟ್​ ಮೂಲಕ ಉತ್ತರ:

ಅರ್ಷದೀಪ್ ಸಿಂಗ್​ ಮಾತುಗಳ ಮೂಲಕ ವಿವಾದ ಸೃಷ್ಟಿಸಿದರೆ, ತಿಲಕ್ ವರ್ಮಾ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಈ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದ ತಿಲಕ್,  ಪಂಜಾಬ್ ಕಿಂಗ್ಸ್ ನೀಡಿದ 201 ರನ್​ಗಳ ಗುರಿ ಬೆನ್ನತ್ತಿ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

 

Published On - 9:28 am, Sat, 16 May 26

Follow Us