
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (England vs Australia) ನಡುವೆ ಓವಲ್ನಲ್ಲಿ ನಡೆಯುತ್ತಿರುವ ನಿರ್ಣಾಯಕ ಮತ್ತು ಅಂತಿಮ ಆ್ಯಶಸ್ ಟೆಸ್ಟ್ (Ashes 2023) ಸರಣಿಯ ಮೊದಲ ದಿನದಾಟದಲ್ಲಿ ಆಸೀಸ್ ಮೇಲುಗೈ ಸಾಧಿಸಿದೆ. ಈಗಾಗಲೇ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಕಾಯ್ದುಕೊಂಡಿರುವ ಆಂಗ್ಲರು ಸರಣಿಯನ್ನು ಸಮಬಲಗೊಳಿಸಬೇಕೆಂದರೆ, ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಆದರೆ ಸ್ಟೋಕ್ಸ್ (Ben Stokes) ಪಡೆಗೆ ಮೊದಲ ಇನ್ನಿಂಗ್ಸ್ನಲ್ಲಿ ಭಾರಿ ಹಿನ್ನಡೆಯುಂಟಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್, ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿ, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 283 ರನ್ಗಳಿಗೆ ಆಲೌಟ್ ಆಗಿದೆ. ಇನ್ನು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ಕಲೆಹಾಕಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ, ತನ್ನ ಎಂದಿನ ಬಾಝ್ ಬಾಲ್ ಕ್ರಿಕೆಟ್ ಶೈಲಿಯಲ್ಲಿ ಮುಂದುವರೆಸಿತು. ಇದರ ಫಲವಾಗಿ ಆತಿಥೇಯರು ಆಗಾಗ್ಗೆ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದರು. ಆರಂಭಿಕರಾದ ಜಾಕ್ ಕ್ರಾಲಿ (21), ಬೆನ್ ಡಕೆಟ್ (41), ಮೊಯಿನ್ ಅಲಿ (34) ಉತ್ತಮ ಆರಂಭದ ಹೊರತಾಗಿಯೂ ಇದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
Ashes 2023: ಕಾಂಗರೂಗಳ ಮೇಲೆ ಆಂಗ್ಲರ ಸವಾರಿ; ರೋಚಕ ಘಟ್ಟದತ್ತ 4ನೇ ಆ್ಯಶಸ್ ಟೆಸ್ಟ್
ತಂಡದ ಮಾಜಿ ನಾಯಕ ಜೋ ರೂಟ್ ಐದು ರನ್ ಗಳಿಸಿ ಔಟಾದರು. ಆದಾಗ್ಯೂ, ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ಬ್ರೂಕ್, 91 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 85 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಕ್ರಿಸ್ ವೋಕ್ಸ್ 36 ಮತ್ತು ಮಾರ್ಕ್ ವುಡ್ 28 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು 250ರ ಗಡಿ ದಾಟಿಸಲು ನೆರವಾದರು.
ಇನ್ನು ಆಸೀಸ್ ಪರ ವೇಗಿ ಸ್ಟಾರ್ಕ್ ಪ್ರಮುಖ 4 ವಿಕೆಟ್ ಉರುಳಿಸಿ ಮಿಂಚಿದರು. ಸ್ಟಾರ್ಕ್ ಹೊರತುಪಡಿಸಿ, ಜೋಶ್ ಹ್ಯಾಜಲ್ವುಡ್ ಮತ್ತು ಟಾಡ್ ಮರ್ಫಿ ತಲಾ ಎರಡು ವಿಕೆಟ್ ಪಡೆದರು. ಕಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ ಒಂದು ವಿಕೆಟ್ ಪಡೆದರು. ಹಾಗೆಯೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಡೇವಿಡ್ ವಾರ್ನರ್ (24) ರೂಪದಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದು, ಉಸ್ಮಾನ್ ಖವಾಜಾ 26 ಮತ್ತು ಮಾರ್ನಸ್ ಲಬುಶೆನ್ 2 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ