Ashes 2023: ರಣರೋಚಕ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್: ಸ್ಟುವರ್ಟ್ ಬ್ರಾಡ್ಗೆ ಗೆಲುವಿನ ವಿದಾಯ
England vs Australia, 5th Test: ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ (72) ಹಾಗೂ ಡೇವಿಡ್ ವಾರ್ನರ್ (60) ಉತ್ತಮ ಆರಂಭ ಒದಗಿಸಿದ್ದರು.
Ashes 2023: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 49 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈ ಬಾರಿಯ ಆ್ಯಶಸ್ ಸರಣಿಯು 2-2 ಸಮಬಲದೊಂದಿಗೆ ಅಂತ್ಯಗೊಂಡಿದೆ. ಹಾಗೆಯೇ ಈ ಅಮೋಘ ಜಯದೊಂದಿಗೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (85) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 283 ರನ್ ಪೇರಿಸಿ ಆಲೌಟ್ ಆಗಿದ್ದರು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 71 ರನ್ಗಳ ಆಕರ್ಷಕ ಅರ್ಧಶತಕ ಬಾರಿಸಿದರು. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 295 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಕೇವಲ 12 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಈ ಬಾರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ (73) ಸ್ಪೋಟಕ ಅರ್ಧಶತಕ ಬಾರಿಸಿದರೆ, ಜೋ ರೂಟ್ ಕೇವಲ 106 ಎಸೆತಗಳಲ್ಲಿ 91 ರನ್ ಚಚ್ಚಿದರು. ಹಾಗೆಯೇ ಜಾನಿ ಬೈರ್ಸ್ಟೋವ್ 78 ರನ್ಗಳ ಕೊಡುಗೆ ನೀಡಿದರು. ಪರಿಣಾಮ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 395 ರನ್ ಪೇರಿಸಿತು.
ಇತ್ತ ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 384 ರನ್ಗಳ ಗುರಿ ಪಡೆಯಿತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಉಸ್ಮಾನ್ ಖ್ವಾಜಾ (72) ಹಾಗೂ ಡೇವಿಡ್ ವಾರ್ನರ್ (60) ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಮಳೆಬಾಧಿತ ನಾಲ್ಕನೇ ದಿನದಾಟದ ಅಂತ್ಯಕ್ಕೆ 135 ರನ್ ಪೇರಿಸಿದ್ದರು.
ಆದರೆ 5ನೇ ದಿನದಾಟದ ಆರಂಭದಲ್ಲೇ ಆಸ್ಟ್ರೇಲಿಯಾ ಆರಂಭಿಕರಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಕ್ರಿಸ್ ವೋಕ್ಸ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಾರ್ಕ್ವುಡ್ ಎಸೆತದಲ್ಲಿ ಮಾರ್ನಸ್ ಲಾಬುಶೇನ್ (13) ಕ್ಯಾಚ್ ನೀಡಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ 4ನೇ ವಿಕೆಟ್ಗೆ 95 ರನ್ಗಳ ಜೊತೆಯಾಟವಾಡಿದರು.
ಭೋಜನ ವಿರಾಮದ ಬಳಿಕ ಕ್ರೀಸ್ಗೆ ಆಗಮಿಸಿದ ಟ್ರಾವಿಸ್ ಹೆಡ್ (43) ರನ್ನು ಮೊಯೀನ್ ಅಲಿ ಔಟ್ ಮಾಡಿದರೆ, ಸ್ಟೀವ್ ಸ್ಮಿತ್ (54) ಗೆ ಕ್ರಿಸ್ ವೋಕ್ಸ್ ಪೆವಿಲಿಯನ್ ಹಾದಿ ತೋರಿಸಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಇಂಗ್ಲೆಂಡ್ ಬೌಲರ್ಗಳು ಆಸ್ಟ್ರೇಲಿಯಾ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಇದರ ಫಲವಾಗಿ ಮಿಚೆಲ್ ಮಾರ್ಷ್ ಕೇವಲ 6 ರನ್ಗಳಿಸಿ ಮೊಯೀನ್ ಅಲಿ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು. ಇದರ ಬೆನ್ನಲ್ಲೇ ಮಿಚೆಲ್ ಸ್ಟಾರ್ಕ್ರನ್ನು ಕ್ರಿಸ್ ವೋಕ್ಸ್ ಶೂನ್ಯಕ್ಕೆ ಔಟ್ ಮಾಡಿದರು. ಒಂದು ಹಂತದಲ್ಲಿ 264 ರನ್ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವು 275 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಪತನಗೊಂಡಿತು.
ಈ ಹಂತದಲ್ಲಿ ಜೊತೆಯಾದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಅಲೆಕ್ಸ್ ಕ್ಯಾರಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಅದರಂತೆ ಈ ಜೋಡಿಯು 19 ರನ್ಗಳಿಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಮೊಯೀನ್ ಅಲಿ ಪ್ಯಾಟ್ ಕಮಿನ್ಸ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ ಅಂತಿಮ ಹಂತದಲ್ಲಿ ಅಲೆಕ್ಸ್ ಕ್ಯಾರಿ ಜೊತೆಗೂಡಿದ ಟಾಡ್ ಮರ್ಫಿ 35 ರನ್ಗಳ ಪಾಲುದಾರಿಕೆ ನೀಡಿದರು. ಇತ್ತ ಕೊನೆಯ 2 ವಿಕೆಟ್ ಪಡೆಯಲು ಇಂಗ್ಲೆಂಡ್ ಬೌಲರ್ಗಳು ಹೆಚ್ಚಿನ ಶ್ರಮವಹಿಸಬೇಕಾಯಿತು. ಇದರ ನಡುವೆ ದಾಳಿಗಿಳಿದ ಸ್ಟುವರ್ಟ್ ಬ್ರಾಡ್ ಟಾಡ್ ಮರ್ಫಿ (18) ವಿಕೆಟ್ ಪಡೆದು ಅಮೂಲ್ಯ ಯಶಸ್ಸು ತಂದುಕೊಟ್ಟರು.
ಅಲ್ಲದೆ ಅಲೆಕ್ಸ್ ಕ್ಯಾರಿ (28) ಯನ್ನು ಔಟ್ ಮಾಡುವ ಮೂಲಕ ಸ್ಟುವರ್ಟ್ ಬ್ರಾಡ್ ತಮ್ಮ ಕೊನೆಯ ಪಂದ್ಯದ ಅಂತಿಮ ಎಸೆತದಲ್ಲಿ ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನು 334 ರನ್ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 49 ರನ್ಗಳ ಜಯ ತಂದುಕೊಟ್ಟರು. ಇನ್ನು ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರೆ, ಮೊಯೀನ್ ಅಲಿ 3 ವಿಕೆಟ್ ಕಬಳಿಸಿದರು. ಹಾಗೆಯೇ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದರು.
A fairytale ending for a legend of the game.
Broady, thank you ❤️ #EnglandCricket | #Ashes pic.twitter.com/RUC5vdKj7p
— England Cricket (@englandcricket) July 31, 2023
ಆ್ಯಶಸ್ ಸರಣಿಯ ಸಂಕ್ಷಿಪ್ತ ಫಲಿತಾಂಶ:
- ಮೊದಲ ಟೆಸ್ಟ್ ಪಂದ್ಯ- ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್ಗಳ ಜಯ
- ಎರಡನೇ ಟೆಸ್ಟ್ ಪಂದ್ಯ- ಆಸ್ಟ್ರೇಲಿಯಾ ತಂಡಕ್ಕೆ 43 ರನ್ಗಳ ಜಯ
- ಮೂರನೇ ಟೆಸ್ಟ್ ಪಂದ್ಯ- ಇಂಗ್ಲೆಂಡ್ ತಂಡಕ್ಕೆ 3 ವಿಕೆಟ್ಗಳ ಜಯ
- ನಾಲ್ಕನೇ ಟೆಸ್ಟ್ ಪಂದ್ಯ- ಮ್ಯಾಚ್ ಡ್ರಾ
- ಐದನೇ ಟೆಸ್ಟ್ ಪಂದ್ಯ- ಇಂಗ್ಲೆಂಡ್ ತಂಡಕ್ಕೆ 49 ರನ್ಗಳ ಜಯ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ಜೋಶ್ ಹ್ಯಾಝಲ್ವುಡ್ , ಟಾಡ್ ಮರ್ಫಿ.
ಇದನ್ನೂ ಓದಿ: Stuart Broad: 151 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ಸ್ಟುವರ್ಟ್ ಬ್ರಾಡ್
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಮೊಯಿನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.
Published On - 10:58 pm, Mon, 31 July 23