
ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಯುವ ಬ್ಯಾಟಿಂಗ್ ಸೆನ್ಸೇಷನ್, 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪಾದಾರ್ಪಣೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸಂಜು ಸಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಸೂರ್ಯವಂಶಿ ಭಾರತ ತಂಡಕ್ಕೆ ಪ್ರವೇಶಿಸಲು ಇನ್ನು ಕೆಲವು ದಿನ ಕಾಯಲೇಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಸರದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಹಿರಿಯ ಆಟಗಾರರನ್ನು ಕೈಬಿಡುವುದು ಸರಿಯಲ್ಲ, ಹೀಗಾಗಿ ಸಂಜು ಸಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಮುಂದುವರೆಸಬೇಕೆಂದು ಅಶ್ವಿನ್ ಆಗ್ರಹಿಸಿದ್ದಾರೆ.
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ಸೃಷ್ಟಿಸಿರುವ ವೈಭವ್ ಸೂರ್ಯವಂಶಿಯನ್ನು ನೇರವಾಗಿ ಐರ್ಲೆಂಡ್ ಅಥವಾ ಇಂಗ್ಲೆಂಡ್ನಂತಹ ಕಠಿಣ ಸರಣಿಗಳಲ್ಲಿ ಕಣಕ್ಕಿಳಿಸಬಾರದು ಎಂದು ಅಶ್ವಿನ್ ಹೇಳಿದ್ದಾರೆ.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಮೆಸ್ಸಿ
ಬದಲಿಗೆ, ಮುಂಬರುವ ಝಿಂಬಾಬ್ವೆ ಪ್ರವಾಸ ಅಥವಾ ಏಷ್ಯನ್ ಗೇಮ್ಸ್‌ನಂತಹ ಪಂದ್ಯಗಳಲ್ಲಿ ಅವರಿಗೆ ಮೊದಲ ಅವಕಾಶ ನೀಡಬೇಕು. ಇದರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಅಶ್ವಿನ್ ಸಲಹೆ ನೀಡಿದ್ದಾರೆ.