Virat Kohli: ಅರ್ಷದೀಪ್ ಕೈ ಚೆಲ್ಲಿದ ಆ ಒಂದು ಕ್ಯಾಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
Asia Cup 2022, India vs Pakistan: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು.

Asia Cup 2022: ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಈ ಮಾತು ಅಕ್ಷರಶಃ ಸತ್ಯ ಎಂಬುದಕ್ಕೆ ಭಾನುವಾರ ನಡೆದ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯವು ಸಾಕ್ಷಿಯಾಯಿತು. ಏಕೆಂದರೆ ಟೀಮ್ ಇಂಡಿಯಾ (Team India) ಆಟಗಾರ ಅರ್ಷದೀಪ್ ಸಿಂಗ್ ಮಾಡಿದ ದೊಡ್ಡ ತಪ್ಪಿನಿಂದಾಗಿ ಇಡೀ ಪಂದ್ಯವೇ ಕೈಜಾರಿತು. ಏಕೆಂದರೆ ರವಿ ಬಿಷ್ಣೋಯ್ ಎಸೆದ 18ನೇ ಓವರ್ನಲ್ಲಿ ಪಾಕ್ ಬ್ಯಾಟ್ಸ್ಮನ್ ಆಸೀಫ್ ಅಲಿ ಕ್ಯಾಚ್ ನೀಡಿದ್ದರು. ಅತ್ಯಂತ ಸುಲಭವಾಗಿ ಹಿಡಿಯಬಹುದಾಗಿದ್ದ ಈ ಕ್ಯಾಚ್ ಅನ್ನು ಅರ್ಷದೀಪ್ ಸಿಂಗ್ ಡ್ರಾಪ್ ಮಾಡಿದ್ದರು.
ವಿಶೇಷ ಎಂದರೆ ಈ ವೇಳೆ ಆಸೀಫ್ ಅಲಿ ಒಂದೇ ಒಂದು ರನ್ಗಳಿಸಿರಲಿಲ್ಲ. ಹೀಗೆ 18ನೇ ಓವರ್ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಆಸೀಫ್ ಅಲಿ 8 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 16 ರನ್ ಬಾರಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಅಂದರೆ ಅರ್ಷದೀಪ್ ಸಿಂಗ್ ಕ್ಯಾಚ್ ಕೈ ಬಿಟ್ಟಾಗ ಪಾಕ್ ತಂಡಕ್ಕೆ 15 ಎಸೆತಗಳಲ್ಲಿ 33 ರನ್ಗಳು ಬೇಕಿತ್ತು. ಆದರೆ ಸಿಕ್ಕ ಅವಕಾಶ ಬಳಸಿಕೊಂಡ ಆಸೀಫ್ ಅಲಿ ಭುವನೇಶ್ವರ್ ಕುಮಾರ್ ಓವರ್ನಲ್ಲಿ ಸಿಕ್ಸ್ – ಫೋರ್ಗಳನ್ನು ಬಾರಿಸಿದ್ದರು. ಪರಿಣಾಮ ಕೊನೆಯ ಓವರ್ನಲ್ಲಿ ಪಾಕ್ ತಂಡಕ್ಕೆ ಗೆಲ್ಲಲು 7 ರನ್ಗಳ ಸುಲಭ ಗುರಿ ಸಿಕ್ಕಿತು. ಅಂತಿಮವಾಗಿ 1 ಎಸೆತ ಬಾಕಿಯಿರುವಾಗ ಪಾಕ್ ತಂಡವು ಗೆಲುವಿನ ಗುರಿಮುಟ್ಟಿತು. ಅಂದರೆ ಟೀಮ್ ಇಂಡಿಯಾ ಸೋಲಿಗೆ ಅರ್ಷದೀಪ್ ಸಿಂಗ್ ಕೈಬಿಟ್ಟ ಕ್ಯಾಚ್ ಕೂಡ ಒಂದು ಕಾರಣ ಎನ್ನಬಹುದು.
ಈ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿಗೆ ಪಂದ್ಯದ ಕೊನೆಯ ಕ್ಷಣಗಳಲ್ಲಿ ಅರ್ಷದೀಪ್ ಸಿಂಗ್ ಕೈಬಿಟ್ಟ ಕ್ಯಾಚ್ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ, ಒತ್ತಡದಲ್ಲಿ ಇಂತಹ ತಪ್ಪುಗಳು ಆಗುತ್ತವೆ. ನನ್ನ ಜೀವನದಲ್ಲೂ ಹೀಗೆ ಈ ಹಿಂದೆ ಆಗಿತ್ತು. ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ಅವರ ಎಸೆತದಲ್ಲಿ ಕೆಟ್ಟ ಶಾಟ್‌ನಿಂದ ನಾನು ಕೂಡ ಔಟಾಗಿದ್ದೆ. ಅದರ ನಂತರ ನನಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಆಗ ನನ್ನ ವೃತ್ತಿಜೀವನ ಅಲ್ಲಿಗೆ ಮುಗಿಯಿತು ಅಂದುಕೊಂಡಿದ್ದೆ.
ಇಂತಹ ಘಟನೆಗಳು ನಡೆಯುವುದು ಸಾಮಾನ್ಯ. ಆದರೆ ನಮ್ಮ ಸೀನಿಯರ್ ಆಟಗಾರರು ಬಂದು ಬೆಂಬಲಿಸುತ್ತಾರೆ. ಏಕೆಂದರೆ ನಾವು ನಾಳೆ ಮತ್ತೆ ಜೊತೆಯಾಗಿ ಆಡಬೇಕಿರುವವರು. ಹೀಗಾಗಿ ತಪ್ಪುಗಳಿಂದ ನಾವು ಪಾಠ ಕಲಿಯುತ್ತೇವೆ. ಮುಂದಿನ ಬಾರಿ ಅಂತಹ ಮತ್ತೊಂದು ಅವಕಾಶ ಸಿಕ್ಕರೆ ಅದನ್ನು ಬಿಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಅರ್ಷದೀಪ್ ಸಿಂಗ್ ಅವರ ಬೆಂಬಲ ವ್ಯಕ್ತಪಡಿಸಿದರು.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್ನಲ್ಲಿ 7 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು.




