Asia cup 2025: ಭಾರತ- ಪಾಕ್ ಸೂಪರ್ 4 ಸುತ್ತಿನ ಪಂದ್ಯಕ್ಕೆ ಮ್ಯಾಚ್ ರೆಫರಿ ನೇಮಕ
Asia Cup 2025 India vs Pakistan Super 4: ಏಷ್ಯಾಕಪ್ 2025 ರ ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಿರ್ಣಾಯಕ ಪಂದ್ಯಕ್ಕೆ ಆಂಡಿ ಪೈಕ್ರಾಫ್ಟ್ ರೆಫರಿಯಾಗಿ ಆಯ್ಕೆಯಾಗಿದ್ದಾರೆ. ಹ್ಯಾಂಡ್‌ಶೇಕ್ ವಿವಾದದ ನಂತರ ಇವರ ಆಯ್ಕೆ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಕ್ಷೇಪಣೆಗಳ ನಡುವೆಯೂ ಪೈಕ್ರಾಫ್ಟ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪಂದ್ಯ ಸೆಪ್ಟೆಂಬರ್ 21 ರಂದು ದುಬೈನಲ್ಲಿ ನಡೆಯಲಿದೆ.

2025 ರ ಏಷ್ಯಾಕಪ್‌ನ (Asia Cup 2025) ಲೀಗ್ ಹಂತ ಮುಕ್ತಾಯವಾಗಿದ್ದು, ಇದೀಗ ಸೂಪರ್ 4 ಸುತ್ತು ಶುರುವಾಗುತ್ತಿದೆ. ಅದರಂತೆ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಸೂಪರ್ 4 ಸುತ್ತಿನ ಪಂದ್ಯ ಇದೇ ಸೆಪ್ಟೆಂಬರ್ 21 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹ್ಯಾಂಡ್‌ಶೇಕ್ ವಿವಾದದ ಬಳಿಕ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದರಿಂದ ಈ ಪಂದ್ಯದಲ್ಲಿ ಮತ್ತ್ಯಾವ ವಿವಾದ ಹುಟ್ಟಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಎರಡೂ ತಂಡಗಳ ನಡುವಿನ ಈ ಹೈವೋಲ್ಟೇಜ್ ಕದನಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮ್ಯಾಚ್ ರೆಫರಿಯನ್ನು ನೇಮಿಸಿದ್ದು, ಮೊದಲ ಮುಖಾಮುಖಿಯಲ್ಲಿ ವಿವಾದ ಹುಟ್ಟಿಕೊಳ್ಳುವುದಕ್ಕೆ ಕಾರಣರಾಗಿದ್ದ ಆಂಡಿ ಪೈಕ್ರಾಫ್ಟ್ ಅವರನ್ನೇ ಈ ಸೂಪರ್ 4 ಸುತ್ತಿನ ಪಂದ್ಯಕ್ಕೂ ಮ್ಯಾಚ್ ರೆಫರಿಯನ್ನಾಗಿ ಆಯ್ಕೆ ಮಾಡಿದೆ.
ಮ್ಯಾಚ್ ರೆಫರಿಯಾಗಿ ಆಂಡಿ ಪೈಕ್ರಾಫ್ಟ್ ಆಯ್ಕೆ
ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 21 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಆಂಡಿ ಪೈಕ್ರಾಫ್ಟ್ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಎರಡೂ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗಲೂ ಪೈಕ್ರಾಫ್ಟ್ ಪಂದ್ಯದ ರೆಫರಿಯಾಗಿದ್ದರು . ಹ್ಯಾಂಡ್‌ಶೇಕ್ ವಿವಾದದ ನಂತರ , ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪೈಕ್ರಾಫ್ಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಅವರನ್ನು ಪಂದ್ಯಾವಳಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತು.
ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಅವರನ್ನು ಕೈಕುಲುಕದಂತೆ ಪೈಕ್ರಾಫ್ಟ್ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿತ್ತು. ಆದಾಗ್ಯೂ, ಇಬ್ಬರು ನಾಯಕರನ್ನು ಮುಜುಗರದಿಂದ ಪಾರು ಮಾಡಲು ಪೈಕ್ರಾಫ್ಟ್ ಹಾಗೆ ಮಾಡಿದ್ದಾರೆ ಎಂದು ಐಸಿಸಿ ಆ ನಂತರ ಸ್ಪಷ್ಟನೆ ನೀಡಿತ್ತು. ಪಾಕಿಸ್ತಾನದ ಕೊನೆಯ ಲೀಗ್ ಪಂದ್ಯಕ್ಕೂ ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪಾಕಿಸ್ತಾನ ಯುಎಇ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತು. ಆದರೆ ರೆಫರಿ ಆಂಡಿ ಪೈಕ್ರಾಫ್ಟ್ ಹಾಗೂ ಪಿಸಿಬಿ ನಡುವೆ ಸಂಧಾನ ಸಭೆ ನಡೆದ ಬಳಿಕ ಪಾಕಿಸ್ತಾನ ಪಂದ್ಯವನ್ನು ಆಡಲು ಒಪ್ಪಿಕೊಂಡಿತು.
Asia Cup 2025: ಕ್ರಮ ಕೈಗೊಳ್ಳದಿದ್ದರೆ ಏಷ್ಯಾಕಪ್ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ
ಗುಂಪು ಹಂತದಲ್ಲಿ ಏಕಪಕ್ಷೀಯ ಗೆಲುವು
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯವೂ ನಡೆದಿತ್ತು. ಆ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಪಾಕಿಸ್ತಾನವನ್ನು ಕೇವಲ 127 ರನ್‌ಗಳಿಗೆ ಸೀಮಿತಗೊಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ 15.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
