AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಭಾರತದೊಂದಿಗೆ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದ ಪಾಕಿಸ್ತಾನ

Asia Cup 2025: ಏಷ್ಯಾಕಪ್ 2025ರಲ್ಲಿ ಪಾಕಿಸ್ತಾನ ತಂಡ ಯುಎಇಯನ್ನು 41 ರನ್‌ಗಳಿಂದ ಸೋಲಿಸಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ತಡವಾಗಿ ಆರಂಭವಾದ ಪಂದ್ಯದಲ್ಲಿ ಪಾಕಿಸ್ತಾನ 146 ರನ್ ಗಳಿಸಿತು, ಯುಎಇ 105 ರನ್‌ಗಳಿಗೆ ಆಲೌಟ್ ಆಯಿತು. ಫಖರ್ ಜಮಾನ್ 50 ರನ್ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಅಮೂಲ್ಯವಾದ 29 ರನ್‌ಗಳನ್ನು ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದರು. ಯುಎಇ ಪರ ಜುನೈದ್ ಸಿದ್ದಿಕಿ 4 ವಿಕೆಟ್ ಪಡೆದರು.

Asia Cup 2025: ಭಾರತದೊಂದಿಗೆ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದ ಪಾಕಿಸ್ತಾನ
Pak Team
ಪೃಥ್ವಿಶಂಕರ
|

Updated on:Sep 18, 2025 | 2:46 PM

Share

ಏಷ್ಯಾಕಪ್ 2025 ರ (Asia Cup 2025) 10ನೇ ಪಂದ್ಯದಲ್ಲಿ ಯುಎಇ ತಂಡವನ್ನು ಮಣಿಸಿದ ಪಾಕಿಸ್ತಾನ ಸೂಪರ್ 4 ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎ ಗುಂಪಿನಲ್ಲಿ ಭಾರತದೊಂದಿಗೆ ಪಾಕಿಸ್ತಾನ ತಂಡ ಸೂಪರ್ 4 ಸುತ್ತನ್ನು ಆಡಲಿದೆ. ಇನ್ನು ಯುಎಇ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 146 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಎಇ ತಂಡ ತನ್ನ ಅನುಭವದ ಕೊರತೆಯಿಂದಾಗಿ 105 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕ್ ತಂಡ ಈ ಪಂದ್ಯವನ್ನು 41 ರನ್​ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಸೂಪರ್ 4 ಸುತ್ತನ್ನು ಪ್ರವೇಶಿಸಿದೆ. ಉಳಿದಂತೆ ಎ ಗುಂಪಿನಲ್ಲಿದ್ದ ಯುಎಇ ಹಾಗೂ ಒಮಾನ್ ತಂಡಗಳು ಲೀಗ್ ಹಂತದಲ್ಲೇ ತಮ್ಮ ಪ್ರಯಾಣ ಮುಗಿಸಿವೆ.

ಸೆಪ್ಟೆಂಬರ್ 17, ಬುಧವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ನಿಗದಿತ ಸಮಯಕ್ಕಿಂತ 1 ಗಂಟೆ ತಡವಾಗಿ ಆರಂಭವಾಯಿತು. ಇದಕ್ಕೆ ಕಾರಣ ಭಾರತದ ವಿರುದ್ಧದ ಪಂದ್ಯದ ಸಮಯದಲ್ಲಿ ಹುಟ್ಟಿಕೊಂಡಿದ್ದ ಹ್ಯಾಂಡ್‌ಶೇಕ್‌ ವಿವಾದ. ಅಂತಿಮವಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನ ತಂಡದ ನಾಯಕನ ಬಳಿ ಕ್ಷಮೆಯಾಚಿಸಿದ ಬಳಿಕ ಪಂದ್ಯ ಆರಂಭವಾಗುವುದು ಖಚಿತವಾಯಿತು.

ಪಾಕಿಸ್ತಾನಕ್ಕೆ ಕಳಪೆ ಆರಂಭ

1 ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಮೊದಲ ಎರಡು ಪಂದ್ಯಗಳಂತೆಯೇ ಕೆಟ್ಟ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಸೈಮ್ ಅಯೂಬ್ ಸತತ ಮೂರನೇ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ರನ್ ಗಳಿಸದೆ ಔಟಾದರು. ಇದಾದ ನಂತರವೂ, ಉಳಿದ ಬ್ಯಾಟ್ಸ್‌ಮನ್‌ಗಳು ಕೂಡ ಕಳಪೆ ಪ್ರದರ್ಶನವನ್ನು ಮುಂದುವರೆಸಿದರು. ಇದರ ಪರಿಣಾಮವಾಗಿ ಪಾಕ್ ತಂಡ 15.1 ಓವರ್‌ಗಳ ಹೊತ್ತಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 93 ರನ್‌ ಕಲೆಹಾಕಿತು. ತಂಡದ ಪರ ಅನುಭವಿ ಫಖರ್ ಜಮಾನ್ 36 ಎಸೆತಗಳಲ್ಲಿ 50 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೂ, ಉಳಿದ ಅಗ್ರ ಕ್ರಮಾಂಕದ ಆಟಗಾರರು ವಿಫಲರಾದರು.

Asia Cup 2025: 0,0,0.. ಸತತ 3ನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಸೈಮ್ ಅಯೂಬ್

ಕೊನೆಯಲ್ಲಿ ಮಿಂಚಿದ ಅಫ್ರಿದಿ

ಅಂತಹ ಪರಿಸ್ಥಿತಿಯಲ್ಲಿ, ಹಿಂದಿನ ಪಂದ್ಯದಂತೆ, ವೇಗಿ ಶಾಹೀನ್ ಶಾ ಅಫ್ರಿದಿ ಮತ್ತೊಮ್ಮೆ ಬ್ಯಾಟಿಂಗ್ ಮೂಲಕ ತಂಡದ ಗೌರವವನ್ನು ಉಳಿಸಿದರು, ಕೇವಲ 14 ಎಸೆತಗಳಲ್ಲಿ 29 ರನ್ ಗಳಿಸುವ ಮೂಲಕ ತಂಡವನ್ನು 146ರನ್​ಗಳಿಗೆ ಕೊಂಡೊಯ್ದರು. ಯುಎಇ ಪರ, ವೇಗಿ ಜುನೈದ್ ಸಿದ್ದಿಕಿ ನಾಲ್ಕು ವಿಕೆಟ್ ಮತ್ತು ಸ್ಪಿನ್ನರ್ ಸಿಮ್ರಂಜೀತ್ ಮೂರು ವಿಕೆಟ್ ಪಡೆದರು.

ಪಾಕಿಸ್ತಾನಕ್ಕೆ ಸುಲಭ ಜಯ

ಯುಎಇ ಆರಂಭಿಕ ಆಟಗಾರ ಅಲಿಶಾನ್ ಶರಫು ಮೈದಾನಕ್ಕೆ ಬಂದ ತಕ್ಷಣ ಆಕ್ರಮಣಕಾರಿ ಪ್ರದರ್ಶನ ನೀಡಿ, ಕೆಲವು ಬೌಂಡರಿಗಳನ್ನು ಗಳಿಸಿದರು, ಆದರೆ ಮೂರನೇ ಓವರ್‌ನಲ್ಲಿ ಶಾಹೀನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ನಾಯಕ ಮೊಹಮ್ಮದ್ ವಾಸಿಮ್ ಅವರನ್ನು ಸ್ಪಿನ್ನರ್ ಅಬ್ರಾರ್ ಅಹ್ಮದ್ ಶೀಘ್ರದಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು. ಆರನೇ ಓವರ್‌ನ ಹೊತ್ತಿಗೆ ಸ್ಕೋರ್ 3 ವಿಕೆಟ್‌ಗೆ 37 ರನ್ ಆಗಿತ್ತು. ಅಲ್ಲಿಂದ ರಾಹುಲ್ ಚೋಪ್ರಾ (35) ಮತ್ತು ಧ್ರುವ್ ಪರಾಶರ್ (20) ನಡುವೆ ಗಮನಾರ್ಹ ಪಾಲುದಾರಿಕೆ ರೂಪುಗೊಂಡಿತು, ಆದರೆ ಅದು ನಿಧಾನಗತಿಯಲ್ಲಿ ಸಾಗಿ ಪಾಕಿಸ್ತಾನಕ್ಕೆ ಮತ್ತೆ ತಂಡಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿತು. ನಂತರ 14 ನೇ ಓವರ್‌ನಲ್ಲಿ 85 ರನ್ ಗಳಿಸಿದಾಗ ಚೋಪ್ರಾ ಔಟಾದರು. ಅಲ್ಲಿಂದ ಇಡೀ ಇನ್ನಿಂಗ್ಸ್ 105 ರನ್‌ಗಳಿಗೆ ಕುಸಿಯಿತು. ಪಾಕಿಸ್ತಾನ ಪರ ಶಾಹೀನ್, ಹ್ಯಾರಿಸ್ ರೌಫ್ ಮತ್ತು ಅಬ್ರಾರ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Thu, 18 September 25