Asia Cup 2025: ಹ್ಯಾಂಡ್‌ಶೇಕ್ ವಿವಾದದ ನಡುವೆ ಭಾರತ-ಪಾಕ್ ಪಂದ್ಯಕ್ಕೆ ದಿನಾಂಕ ನಿಗದಿ
India vs Pakistan Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯದಲ್ಲಿ ಉಂಟಾದ ಕೈಕುಲುಕುವ ವಿವಾದದ ನಂತರ, ಎರಡೂ ತಂಡಗಳು ಸೆಪ್ಟೆಂಬರ್ 21 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಭಾರತ ತಂಡ ಗುಂಪು ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸೂಪರ್ ಫೋರ್‌ಗೆ ಅರ್ಹತೆ ಪಡೆದರೆ, ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಈ ಪಂದ್ಯ ದುಬೈನಲ್ಲಿ ನಡೆಯಲಿದೆ.

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಗುಂಪು ಹಂತದ ಪಂದ್ಯ ಸೆಪ್ಟೆಂಬರ್ 14 ರಂದು ನಡೆದಿತ್ತು. ಆದರೆ ಮುಗಿದು ನಾಲ್ಕೈದು ದಿನಗಳು ಕಳೆದರು ಆ ಪಂದ್ಯ ಇನ್ನೂ ಚರ್ಚೆಯಿದೆ. ಇದಕ್ಕೆ ಕಾರಣ ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ನಂತರ ಹುಟ್ಟುಕೊಂಡಿದ್ದ ವಿವಾದ. ವಾಸ್ತವವಾಗಿ ಟಾಸ್ ಸಮಯದಲ್ಲಿ ನಾಯಕ ಸೂರ್ಯ ಪಾಕ್ ನಾಯಕನೊಂದಿಗೆ ಕೈಕುಲುಕಲಿಲ್ಲ. ಪಂದ್ಯ ಮುಗಿದ ಬಳಿಕ ಭಾರತ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ, ಇದು ಎರಡೂ ದೇಶಗಳ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು. ಈ ಘಟನೆಯ ನಂತರ, ಪಾಕಿಸ್ತಾನವು ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತು. ಇದರಿಂದ ಯುಎಇ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವಿಳಂಬವಾಗಲು ಕಾರಣವಾಯಿತು. ಇದೀಗ ಈ ವಿವಾದ ಕಡಿಮೆಯಾಗುವುದಕ್ಕೂ ಮುನ್ನವೇ ಎರಡೂ ತಂಡಗಳು ಮತ್ತೊಮ್ಮೆ ಪರಸ್ಪರ ಮುಖಾಮುಖಿಯಾಗಲಿವೆ.
ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿ
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಎ ನಿಂದ ಸೂಪರ್ ಫೋರ್‌ಗೆ ಮುನ್ನಡೆದಿದ್ದು, ಸೆಪ್ಟೆಂಬರ್ 21 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಗ್ರೂಪ್ ಎ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡ ಸೂಪರ್ ಫೋರ್‌ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ, ಪಾಕಿಸ್ತಾನ ಮುಂದಿನ ಸುತ್ತನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಇಲ್ಲಿಯವರೆಗೆ ಗುಂಪು ಹಂತದಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ.
ಇತ್ತ ಪಾಕಿಸ್ತಾನದ ಗುಂಪು ಹಂತದ ಪಂದ್ಯಗಳು ಪೂರ್ಣಗೊಂಡಿದ್ದು, ಆಡಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಒಂದರಲ್ಲಿ ಸೋತಿದೆ. ಈ ಮೂಲಕ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಭಾರತ, ಒಮಾನ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಾಗಿದೆ. ಆದರೆ ಒಮಾನ್ ತಂಡ ಈಗಾಗಲೇ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿರುವ ಕಾರಣ ಸೂಪರ್ ಫೋರ್ ರೇಸ್‌ನಿಂದ ಹೊರಬಿದ್ದಿದೆ.
Asia Cup 2025: ಭಾರತದೊಂದಿಗೆ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದ ಪಾಕಿಸ್ತಾನ
ಭಾರತಕ್ಕೆ ಏಕಪಕ್ಷೀಯ ಗೆಲುವು
ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಅಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 127 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಂ ಇಂಡಿಯಾ 15.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
