ಭಾರತದ ಕೈಯಲ್ಲಿದ್ದ ಗೆಲುವು ಕಸಿದ ಹಮ್ಜಾ; ಏಷ್ಯಾಕಪ್‌ನಲ್ಲಿ ಪಾಕ್‌ಗೆ ಜಯ

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ರೋಚಕ ಪಂದ್ಯದಲ್ಲಿ ಹಮ್ಜಾ ಜಹೂರ್ ಅವರ ಶತಕದಿಂದ ಭಾರತ ಸೋಲು ಕಂಡಿತು. 209 ರನ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 61/5 ಆಗಿದ್ದಾಗ, ಹಮ್ಜಾ ಅಜೇಯ 100 ರನ್ ಸಿಡಿಸಿ ತಂಡಕ್ಕೆ ಅಮೋಘ ಗೆಲುವು ತಂದಿತ್ತರು. ಭಾರತದ ಅರ್ಜುನ್ ರಜಪೂತ್ ಶತಕ ಸಿಡಿಸಿದರೂ, ಹಮ್ಜಾ ಅದ್ಭುತ ಬ್ಯಾಟಿಂಗ್ ಬಲದಿಂದ ಪಾಕಿಸ್ತಾನ ವಿಜಯ ಸಾಧಿಸಿತು.

ಭಾರತದ ಕೈಯಲ್ಲಿದ್ದ ಗೆಲುವು ಕಸಿದ ಹಮ್ಜಾ; ಏಷ್ಯಾಕಪ್‌ನಲ್ಲಿ ಪಾಕ್‌ಗೆ ಜಯ
ಭಾರತ ಯುವ ಪಡೆ

Updated on: Nov 08, 2026 | 6:43 PM

ಅಂಡರ್-19 ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತ ಯುವ ತಂಡ ಸೋಲು ಕಂಡಿದೆ. 209 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ ಕೇವಲ 61 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಈ ವೇಳೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹಮ್ಜಾ ಜಹೂರ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಶತಕ ಸಿಡಿಸಿದ ಅವರು ಪಾಕಿಸ್ತಾನಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಭಾರತದ ಕೈಯಲ್ಲಿದ್ದ ಗೆಲುವನ್ನು ಹಮ್ಜಾ ತಮ್ಮ ಬ್ಯಾಟಿಂಗ್ ಬಲದಿಂದ ಕಸಿದುಕೊಂಡರು.

61 ರನ್‌ಗಳಿಗೆ ಐದು ವಿಕೆಟ್ ಪತನ

ಓಮನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅರ್ಜುನ್ ರಜಪೂತ್ ಅವರ ಭರ್ಜರಿ 107 ರನ್‌ಗಳ ಶತಕದ ನೆರವಿನಿಂದ ಭಾರತ 46.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಾಕಿಸ್ತಾನಕ್ಕೆ ಗೆಲ್ಲಲು 209 ರನ್‌ಗಳ ಗುರಿ ಎದುರಾಯಿತು.

Loading...

ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಭಾರತೀಯ ಬೌಲರ್‌ಗಳು ಬಿಸಿ ಮುಟ್ಟಿಸಿದರು. ಜಹಾಂಗೀರ್ ಬಿಲಾಲ್, ಉಸ್ಮಾನ್ ಖಾನ್, ಅಬ್ದುಲ್ ಖಾದಿರ್, ಅಹ್ಮದ್ ಹುಸೇನ್ ಹಾಗೂ ನಾಯಕ ಫರ್ಹಾನ್ ಯೂಸುಫ್ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿದರು. ಪರಿಣಾಮ ಪಾಕಿಸ್ತಾನ ಕೇವಲ 61 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು.

ಹಮ್ಜಾ-ಅಬ್ಬಾಸ್ ಜೊತೆಯಾಟ

ಈ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಹಮ್ಜಾ ಜಹೂರ್ ಹಾಗೂ ಹಸ್ನೈನ್ ಅಬ್ಬಾಸ್ ದಾರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಎಚ್ಚರಿಕೆಯಿಂದ ರನ್ ಕಲೆಹಾಕಿತು. ಆರನೇ ವಿಕೆಟ್‌ಗೆ 107 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಇಬ್ಬರೂ ಪಾಕಿಸ್ತಾನವನ್ನು ಮತ್ತೆ ಗೆಲುವಿನ ಹಾದಿಗೆ ತಂದರು. ಅಬ್ಬಾಸ್ 67 ಎಸೆತಗಳಲ್ಲಿ 38 ರನ್ ಗಳಿಸಿ ಮನಾಲ್ ಚೌಹಾಣ್ ಬೌಲಿಂಗ್‌ನಲ್ಲಿ ಔಟಾದರು. ಆದರೆ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಹಮ್ಜಾ ಮಾತ್ರ ಯಾವುದೇ ಒತ್ತಡಕ್ಕೆ ಮಣಿಯದೆ ತಂಡದ ಗೆಲುವಿಗಾಗಿ ಹೋರಾಟ ಮುಂದುವರಿಸಿದರು.

ಅನ್ವಯ್ ದ್ರಾವಿಡ್ ಅದ್ಭುತ ಕ್ಯಾಚ್‌

ಪಾಕಿಸ್ತಾನ ಗೆಲುವಿನ ಸನಿಹದಲ್ಲಿದ್ದಾಗ ಭಾರತಕ್ಕೆ ಏಳನೇ ವಿಕೆಟ್ ರೂಪದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿತು. ವಿಕೆಟ್ ಕೀಪರ್ ಅನ್ವಯ್ ದ್ರಾವಿಡ್ ಅದ್ಭುತ ಕ್ಯಾಚ್ ಹಿಡಿದು ಮೊಹಮ್ಮದ್ ಸಯ್ಯಮ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. 42.5ನೇ ಓವರ್‌ನಲ್ಲಿ ಸಯ್ಯಮ್ ಬ್ಯಾಟ್‌ಗೆ ತಗುಲಿದ ಚೆಂಡನ್ನು ಅನ್ವಯ್ ಒಂದೇ ಕೈಯಲ್ಲಿ ಅದ್ಭುತವಾಗಿ ಹಿಡಿದರು. ಇದರೊಂದಿಗೆ ಪಾಕಿಸ್ತಾನ 183 ರನ್‌ಗಳಿಗೆ ಏಳನೇ ವಿಕೆಟ್ ಕಳೆದುಕೊಂಡಿತು. ಈ ವಿಕೆಟ್‌ನಿಂದ ಭಾರತ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿತು. ಆದರೆ ಮತ್ತೊಂದು ತುದಿಯಲ್ಲಿ ಅಬ್ಬರಿಸುತ್ತಿದ್ದ ಹಮ್ಜಾ ಅವರನ್ನು ಭಾರತೀಯ ಬೌಲರ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಅಂಡರ್-19 ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ: ಸೆಹ್ವಾಗ್, ದ್ರಾವಿಡ್ ಪುತ್ರರಿಗೆ ಸ್ಥಾನ

ಶತಕ ಸಿಡಿಸಿದ ಹಮ್ಜಾ

ಕೊನೆಯ ಹಂತದಲ್ಲಿ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಾಯಿತು. ಪಾಕಿಸ್ತಾನದ ಗೆಲುವಿಗೆ ಬೇಕಿದ್ದ ರನ್‌ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಹಮ್ಜಾ ಜಹೂರ್ ಬೌಂಡರಿಗಳ ಸುರಿಮಳೆಗೈದರು. ಕೊನೆಯ ಹಂತದಲ್ಲಿ ಭಾರತಕ್ಕೆ ಗೆಲುವು ಕಸಿದುಕೊಳ್ಳುವ ಅವಕಾಶವಿದ್ದರೂ ಹಮ್ಜಾ ಯಾವುದೇ ತಪ್ಪು ಮಾಡಲಿಲ್ಲ. ಅಂತಿಮವಾಗಿ ಬೌಂಡರಿ ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟ ಹಮ್ಜಾ, ಇದೇ ವೇಳೆ ತಮ್ಮ ಶತಕವನ್ನೂ ಪೂರ್ಣಗೊಳಿಸಿದರು. ಅವರು 107 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Sun, 8 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us