9 ಭರ್ಜರಿ ಸಿಕ್ಸರ್, 3 ಫೋರ್: ಶಫಾಲಿ ವರ್ಮಾ ಸ್ಫೋಟಕ ಸೆಂಚುರಿ

ಟಿ20 ಕ್ರಿಕೆಟ್​ನಲ್ಲಿ ಶಫಾಲಿ ವರ್ಮಾ ಅವರ ಆರ್ಭಟ ಮುಂದುವರೆದಿದೆ. ಈ ಅಬ್ಬರದೊಂದಿಗೆ ಅವರು ಇದೀಗ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಐತಿಹಾಸಿಕ ಪ್ರದರ್ಶನದ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಶತಕ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ಶಫಾಲಿ ವರ್ಮಾ ತಮ್ಮದಾಗಿಸಿಕೊಂಡಿದ್ದಾರೆ.

9 ಭರ್ಜರಿ ಸಿಕ್ಸರ್, 3 ಫೋರ್: ಶಫಾಲಿ ವರ್ಮಾ ಸ್ಫೋಟಕ ಸೆಂಚುರಿ
ಶಫಾಲಿ ವರ್ಮಾ
Image Credit source: Asian Games

Updated on: Sep 20, 2026 | 12:34 PM

ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಫೋಟಕ ಓಪನರ್ ಶಫಾಲಿ ವರ್ಮಾ, ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾನುವಾರ ನಡೆದ ಬಾಂಗ್ಲಾದೇಶ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ, ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಚೊಚ್ಚಲ ಶತಕವನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಈ ಶತಕದೊಂದಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಭರ್ಜರಿ ಸೆಂಚುರಿ:

ಜಪಾನ್‌ನ ನಿಶ್ಶಿನ್​ ನಗರದ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಫಾಲಿ ವರ್ಮಾ ಬಿರುಸಿನ ಆರಂಭ ಒದಗಿಸಿದ್ದರು. ಬಾಂಗ್ಲಾದೇಶ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಶಫಾಲಿ ಕೇವಲ 49 ಎಸೆತಗಳಲ್ಲಿ ತಮ್ಮ ಸ್ಮರಣೀಯ ಶತಕವನ್ನು ಪೂರೈಸಿದರು. ಶಫಾಲಿಯ ಈ ವಿಸ್ಫೋಟಕ ಇನಿಂಗ್ಸ್​ನಲ್ಲಿ ಭರ್ಜರಿ 9 ಸಿಕ್ಸರ್ ಹಾಗೂ 3 ಬೌಂಡರಿಗಳು ಸೇರಿದ್ದವು.

ಏಷ್ಯನ್ ಗೇಮ್ಸ್​ನ ಮೊದಲ ಶತಕ:

ಈ ಶತಕದೊಂದಿಗೆ ಶಫಾಲಿ ವರ್ಮಾ ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಮೊದಲ ಮಹಿಳಾ ಕ್ರಿಕೆಟರ್ ಎಂಬ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಶತಕ ಬಾರಿಸಿದ ಮೂರನೇ ಮಹಿಳಾ ಬ್ಯಾಟರ್ (ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತಕ್ಕೆ ಬೃಹತ್ ಮೊತ್ತ:

ಶಫಾಲಿ ವರ್ಮಾ ಅವರ ಸಿಡಿಲಬ್ಬರದ ಸೆಂಚುರಿ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ 196 ರನ್​ಗಳ ಕಠಿಣ ಗುರಿ ನೀಡಿದೆ.

ಭಾರತ ಪ್ಲೇಯಿಂಗ್ 11:  ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಗುಣಲನ್ ಕಮಲಿನಿ , ಹರ್ಮನ್‌ಪ್ರೀತ್ ಕೌರ್ (ನಾಯಕಿ) ,
ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ , ದೀಪ್ತಿ ಶರ್ಮಾ , ಶ್ರೇಯಾಂಕ ಪಾಟೀಲ್ , ಶ್ರೀ ಚರಣಿ , ನಂದನಿ ಶರ್ಮಾ ,
ಕ್ರಾಂತಿ ಗೌಡ್.

ಇದನ್ನೂ ಓದಿ: ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ ಸ್ಮೃತಿ ಮಂಧಾನ!

ಬಾಂಗ್ಲಾದೇಶ್ ಪ್ಲೇಯಿಂಗ್ 11: ದಿಲಾರಾ ಅಕ್ತರ್ , ಜುಯೆರಿಯಾ ಫರ್ದೌಸ್ , ಶೋಭಾನ ಮೋಸ್ಟರಿ , ನಿಗರ್ ಸುಲ್ತಾನ (ನಾಯಕಿ) , ಶೋರ್ನಾ ಅಕ್ತರ್ , ಶರ್ಮಿನ್ ಅಖ್ತರ್ , ಶಂಜಿದಾ ಅಕ್ತರ್ ಮೇಘಲಾ , ರಬೇಯಾ ಖಾನ್ , ನಹಿದಾ ಅಕ್ತರ್ ,
ಮರುಫಾ ಅಕ್ತರ್ , ಸುಲ್ತಾನ ಖಾತುನ್.

 

Loading...
Unable to load recommendations.
Follow Us