ಅಮೋಘ ಗೆಲುವಿನೊಂದಿಗೆ ಫೈನಲ್​ಗೇರಿದ ಆಸ್ಟ್ರೇಲಿಯಾ

Australia Women vs West Indies Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 13 ಓವರ್​​ಗಳಲ್ಲಿ 127 ರನ್​ ಬಾರಿಸಿ 8 ವಿಕೆಟ್​​ಗಳ ಅಮೋಘ ಗೆಲುವು ದಾಖಲಿಸಿದೆ.

ಅಮೋಘ ಗೆಲುವಿನೊಂದಿಗೆ ಫೈನಲ್​ಗೇರಿದ ಆಸ್ಟ್ರೇಲಿಯಾ
Australia
Image Credit source: ANI

Updated on: Jul 01, 2026 | 7:33 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್​ನಲ್ಲಿ ಅಮೋಘ ಗೆಲುವು ದಾಖಲಿಸಿ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಆಸೀಸ್ ಪಡೆ 8ನೇ ಬಾರಿ ಫೈನಲ್​ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಕ್ಯಾಪ್ಟನ್ ಹೇಲಿ ಮ್ಯಾಥ್ಯೂಸ್ (30 ರನ್) ಮತ್ತು ಕಯಾನಾ ಜೋಸೆಫ್ (16 ರನ್) ಉತ್ತಮ ಆರಂಭ ಒದಗಿಸಿದ್ದರು.  ಮೊದಲ ವಿಕೆಟ್‌ಗೆ 47 ರನ್ ಪೇರಿಸಿದ್ದ ಈ ಜೋಡಿಯನ್ನು ಜಾರ್ಜಿಯಾ ವೇರ್‌ಹ್ಯಾಮ್ ಬೇರ್ಪಡಿಸಿದರು.

ಆ ಬಳಿಕ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ (2/13) ಮತ್ತು ಜಾರ್ಜಿಯಾ ವೇರ್ಹ್ಯಾಮ್ (2/17) ಅವರ ಸ್ಪಿನ್​ಗೆ ಸಿಲುಕಿದ ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್‌ಗಳಿಸಲಷ್ಟೇ ಶಕ್ತರಾದರು.

13 ಓವರ್​ಗಳಲ್ಲಿ ಪಂದ್ಯ ಫಿನಿಶ್!

126 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಜಾರ್ಜಿಯಾ ವೋಲ್ (16) ಮತ್ತು ಫೋಬೆ ಲಿಚ್‌ಫೀಲ್ಡ್ (4) ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದೆಡೆ ಅನುಭವಿ ಆಟಗಾರ್ತಿ ಬೆತ್ ಮೂನಿ ಕೇವಲ 36 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಅಜೇಯ 61 ರನ್ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಈ ಮೂಲಕ ಆಸ್ಟ್ರೇಲಿಯಾ ತಂಡ ಇನ್ನು 42 ಎಸೆತಗಳು ಬಾಕಿ ಇರುವಂತೆಯೇ 13 ಓವರ್‌ಗಳಲ್ಲಿ 127 ರನ್ ಗಳಿಸಿ ಜಯಭೇರಿ ಬಾರಿಸಿತು.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಮೊದಲ ಸೆಮಿಫೈನಲ್ ಹೈಲೆಟ್ಸ್:

YouTube video player

ಫೈನಲ್ ಯಾವಾಗ?

ಮಹಿಳಾ ಟಿ20 ವಿಶ್ವಕಪ್​ನ ಫೈನಲ್ ಪಂದ್ಯವು ಜುಲೈ 5 ರಂದು ನಡೆಯಲಿದೆ. ಲಾರ್ಡ್ಸ್​ ಮೈದಾನದಲ್ಲಿ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ಅಥವಾ ಇಂಗ್ಲೆಂಡ್ ತಂಡ ಕಣಕ್ಕಿಳಿಯಲಿದೆ.

 

Published On - 7:20 am, Wed, 1 July 26

Follow Us