BAN vs AUS: ಸೊನ್ನೆಗೆ 3 ವಿಕೆಟ್; ಬಾಂಗ್ಲಾ ವಿರುದ್ಧ ಬೇಡದ ದಾಖಲೆ ಬರೆದ ಆಸ್ಟ್ರೇಲಿಯಾ
Australia's Historic Batting Collapse: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಬೇಡದ ದಾಖಲೆ ಸೃಷ್ಟಿಸಿದೆ. ತಂಡದ ಅಗ್ರ ಮೂವರು ಬ್ಯಾಟರ್‌ಗಳಾದ ಮ್ಯಾಟ್ ಶಾರ್ಟ್, ಕೂಪರ್ ಕನೋಲಿ, ಮತ್ತು ಮ್ಯಾಥ್ಯೂ ರೆನ್ಶಾ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಯಾವುದೇ ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು. ಈ ಬೇಡದ ದಾಖಲೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜೊತೆ ಆಸೀಸ್ ಸೇರಿಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡ (Bangladesh vs Australia), ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಹೀನಾಯವಾಗಿ ಸೋತು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತ್ತು. ಇದೀಗ ಸರಣಿಯ ಎರಡನೇ ಪಂದ್ಯದಲ್ಲೂ ಕಾಂಗರೂಗಳ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದೆ. ಬಾಂಗ್ಲಾ ನೆಲದಲ್ಲಿ ನೆಲಕಚ್ಚಿ ಆಡುವುದನ್ನು ಮರೆತಿರುವ ಆಸೀಸ್ ಬ್ಯಾಟರ್ಗಳು ಒಂದಂಕಿ ದಾಟಲು ಪರದಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ತಂಡದ ಅಗ್ರ ಮೂವರು ಬ್ಯಾಟರ್ಗಳು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ದಾಖಲಿಸಿದ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು.
ಆರಂಭಿಕರಿಬ್ಬರು ಸೊನ್ನೆಗೆ ಔಟ್
ಢಾಕಾದ ಶೇರ್ ಎ ಬಾಂಗ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತದ ಮೇಲೆ ಆಘಾತ ಎದುರಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮ್ಯಾಟ್ ಶಾರ್ಟ್ ಹಾಗೂ ಕೂಪರ್ ಕನೋಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಶಾರ್ಟ್ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗದೆ ತಸ್ಕಿನ್ ಅಹ್ಮದ್ಗೆ ಬಲಿಯಾದರೆ, ಇತ್ತ ಕನೋಲಿ, ಮುಸ್ತಫಿಜುರ್ ರೆಹಮಾನ್ ಎಸೆದ ಎರಡನೇ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಆಸ್ಟ್ರೇಲಿಯಾ ಯಾವುದೇ ರನ್ ಕಲೆಹಾಕುವ ಮೊದಲೆ ತನ್ನೇರಡು ವಿಕೆಟ್‌ಗಳನ್ನು ಕಳೆದುಕೊಂಡಿತು.
I follow Australia's domestic cricket quite a bit & I haven't seen worse talent pool in Aus ever than what they are having right now!
They somehow need to convince Steve Smith to take his retirement back & play WC 2027!pic.twitter.com/YP6ZcCT47i
— Rajiv (@Rajiv1841) June 11, 2026
ಸೊನ್ನೆಗೆ 3 ವಿಕೆಟ್ ಪತನ
ಆ ನಂತರ 4ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ರೆನ್ಶಾ, ನಾಯಕ ಜೋಶ್ ಇಂಗ್ಲಿಸ್ ಜೊತೆಗೂಡಿ ತಂಡದ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತಿದ್ದರು. ಆದರೆ ರೆನ್ಶಾ ಕೂಡ ತಂಡದ ಖಾತೆಗೆ ಯಾವುದೇ ರನ್ ಸೇರುವ ಮೊದಲೇ 4 ಎಸೆತಗಳನ್ನು ಎದುರಿಸಿ ರೆಹಮಾನ್ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆಸೀಸ್ ತಂಡ ಸೊನ್ನೆಗೆ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಯಾವುದೇ ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು. ಆಸೀಸ್ಗೂ ಮೊದಲು 1993 ಮತ್ತು 1997 ರಲ್ಲಿ ಪಾಕಿಸ್ತಾನ ತಂಡ ಈ ಬೇಡದ ದಾಖಲೆಯನ್ನು ನಿರ್ಮಿಸಿದ್ದರೆ, ಬಾಂಗ್ಲಾದೇಶ ಕೂಡ 2003 ರಲ್ಲಿ ಶ್ರೀಲಂಕಾ ವಿರುದ್ಧ ಶೂನ್ಯಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಇದೀಗ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಸೊನ್ನೆಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಬೇಡದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ತಸ್ಕಿನ್, ರೆಹಮಾನ್ ಮಾರಕ ದಾಳಿ
ಆದಾಗ್ಯೂ 7 ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಲಬುಶೇನ್ ಮತ್ತು ಬಾರ್ಟ್ಲೆಟ್ ಅವರ ಅರ್ಧಶತಕ ಹಾಗೂ ನಾಯಕ ಇಂಗ್ಲಿಸ್ ಅವರ 34 ರನ್ಗಳ ಉಪಯುಕ್ತ ಇನ್ನಿಂಗ್ಸ್ನಿಂದಾಗಿ 42 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಆದರೆ ಮಳೆಯ ಮಧ್ಯ ಪ್ರವೇಶದಿಂದ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇತ್ತ ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಇಸ್ಲಾಂ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Thu, 11 June 26




