WTC Final 2025: ಗದಾಯುದ್ಧಕ್ಕೆ ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ ತಂಡಗಳು ಪ್ರಕಟ
WTC Final 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಈವರೆಗೆ ಎರಡು ಬಾರಿ ಫೈನಲ್ ಫೈಟ್ ನಡೆದಿದೆ. 2021 ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಅಂತಿಮ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು ನ್ಯೂಝಿಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇನ್ನು 2023 ರಲ್ಲಿ ಟೀಮ್ ಇಂಡಿಯಾ ಮತ್ತೆ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಫೈನಲ್ ಫೈಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲನುಭವಿಸಿತು.

ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2025) ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಜೂನ್ 11 ರಿಂದ ಶುರುವಾಗಲಿರುವ ಈ ಬಾರಿಯ WTC ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಹಾಗೂ ಸೌತ್ ಆಫ್ರಿಕಾ (South Africa) ತಂಡಗಳು ಮುಖಾಮುಖಿಯಾಗಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಇದೀಗ ಉಭಯ ತಂಡಗಳು ಬಲಿಷ್ಠ ಪಡೆಯನ್ನು ಘೋಷಿಸಿದೆ.
ಇತ್ತ ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಿದರೆ, ಅತ್ತ ಸೌತ್ ಆಫ್ರಿಕಾ ತಂಡದ ನಾಯಕನಾಗಿ ಟೆಂಬಾ ಬವುಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸೀಸ್ ಪಡೆಯಲ್ಲಿ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್ನಂತಹ ಘಟಾನುಘಟಿಯರಿದ್ದರೆ, ಅತ್ತ ಆಫ್ರಿಕನ್ ಪಡೆಯಲ್ಲಿ ರಯಾನ್ ರಿಕೆಲ್ಟನ್, ಟೋನಿ ಝೋರ್ಝಿ, ಐಡೆನ್ ಮಾರ್ಕ್ರಾಮ್ನಂತಹ ಬ್ಯಾಟರ್ಗಳಿದ್ದಾರೆ.
ಇನ್ನು ಬೌಲರ್ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಇದ್ದರೆ, ಸೌತ್ ಆಫ್ರಿಕಾ ತಂಡದಲ್ಲಿ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್ ಇದ್ದಾರೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ಹೀಗಿವೆ:
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್, ಸ್ಯಾಮ್ ಕೊನ್ಸ್ಟಾಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ , ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್, ಮ್ಯಾಥ್ಯೂ ಕುಹ್ನೆಮನ್.
ಇದನ್ನೂ ಓದಿ: IPL 2025: ಕೇವಲ 2 ಮ್ಯಾಚ್ಗೆ ಮಾತ್ರ: ಉಳಿದ ಪಂದ್ಯಗಳಿಂದ RCB ಆಟಗಾರ ಔಟ್
ಸೌತ್ ಆಫ್ರಿಕಾ ಟೆಸ್ಟ್ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಾರ್ಬಿನ್ ಬಾಷ್, ಕೈಲ್ ವೆರ್ರಿನ್ನೆ, ಡೇವಿಡ್ ಬೆಡಿಂಗ್‌ಹ್ಯಾಮ್, ಟ್ರಿಸ್ಟಾನ್ ಸ್ಟಬ್ಸ್, ರಯಾನ್ ರಿಕಲ್ಟನ್, ಸೆನುರಾನ್ ಮುತ್ತುಸಾಮಿ, ಡೇನ್ ಪೀಟರ್ಸನ್.
WTC ಫೈನಲ್ ಪಂದ್ಯ ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 3.30 ಕ್ಕೆ ಶುರುವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಹಾಗೂ ಜಿಯೋ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ಲೈವ್ ವೀಕ್ಷಿಸಬಹುದು.
