AUS vs PAK: ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಸೋಲಿಸುತ್ತೇವೆ ಎಂದಿದ್ದ ಪಾಕ್ ನಾಯಕನಿಗೆ ಶಾಕ್ ನೀಡಿದ ಕಾಂಗರೂಗಳು

AUS vs PAK: ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತು. ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್‌ನಿಂದ ಪಾಕಿಸ್ತಾನ ಕೇವಲ 203 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಕೂಡ ಕಷ್ಟದಲ್ಲಿತ್ತು ಆದರೆ ಕೊನೆಯಲ್ಲಿ ಕಮಿನ್ಸ್ ಮತ್ತು ಸ್ಟಾರ್ಕ್ ನಡುವಿನ ಜೊತೆಯಾಟ ತಂಡಕ್ಕೆ ಗೆಲುವು ತಂದುಕೊಟ್ಟಿತು. ರಿಜ್ವಾನ್ ನಾಯಕತ್ವ ಸೋಲಿನೊಂದಿಗೆ ಆರಂಭವಾಗಿದೆ.

AUS vs PAK: ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಸೋಲಿಸುತ್ತೇವೆ ಎಂದಿದ್ದ ಪಾಕ್ ನಾಯಕನಿಗೆ ಶಾಕ್ ನೀಡಿದ ಕಾಂಗರೂಗಳು
ಆಸ್ಟ್ರೇಲಿಯಾ- ಪಾಕಿಸ್ತಾನ
Follow us
ಪೃಥ್ವಿಶಂಕರ
|

Updated on:Nov 04, 2024 | 5:00 PM

ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಸೋಲಿನೊಂದಿಗೆ ಆರಂಭವಾಗಿದೆ. ಏಕದಿನ ಸರಣಿಗಾಗಿ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ್ದ ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಸೋಲನುಭವಿಸಿದೆ. ನವೆಂಬರ್ 4 ರ ಸೋಮವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 203 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಕಾಂಗರೂ ತಂಡ ಕೂಡ ಒಂದು ಹಂತದಲ್ಲಿ 185 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ, ಇದಾದ ನಂತರ ಜೊತೆಯಾದ ಸ್ಟಾರ್ಕ್ ಮತ್ತು ಕಮಿನ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸ್ಟಾರ್ಕ್ ದಾಳಿಗೆ ನಲುಗಿದ ಪಾಕಿಸ್ತಾನ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ, ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ವೇಗದ ಮತ್ತು ಬೌನ್ಸಿ ಪಿಚ್‌ನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ವಿರುದ್ಧ ಸಂಪೂರ್ಣ ಶರಣಾಯಿತು. ಟೆಸ್ಟ್ ಬಳಿಕ ಏಕದಿನಕ್ಕೆ ಎಂಟ್ರಿ ಕೊಟ್ಟ ಅಬ್ದುಲ್ಲಾ ಶಫೀಕ್ ಮತ್ತು ಸೈಮ್ ಅಯೂಬ್ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದ ಅಯೂಬ್ ಮೊದಲ ಓವರ್‌ನಲ್ಲಿಯೇ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರೆ, ಸ್ಟಾರ್ಕ್ ತಮ್ಮ ಮುಂದಿನ ಓವರ್‌ನಲ್ಲಿ ಶಫೀಕ್ ಅವರನ್ನು ಔಟ್ ಮಾಡಿದರು. ಟೆಸ್ಟ್ ತಂಡದಿಂದ ಹೊರಬಿದ್ದ ನಂತರ ಏಕದಿನ ಸರಣಿಗೆ ಮರಳಿದ ಬಾಬರ್ ಆಝಂ ಬಂದ ತಕ್ಷಣ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿದರು. ಆದರೆ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಎಸೆತದಲ್ಲಿ ಬಾಬರ್ ಕ್ಲೀನ್ ಬೌಲ್ಡ್ ಆದರು.

ಪಾಕಿಸ್ತಾನದ ನೂತನ ನಾಯಕ ಮೊಹಮ್ಮದ್ ರಿಜ್ವಾನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಇನಿಂಗ್ಸ್ ನಿಭಾಯಿಸಿ 44 ರನ್ ಗಳಿಸಿ ಔಟಾದರು. ಹೀಗಾಗಿ ಪಾಕಿಸ್ತಾನ ಕೇವಲ 117 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಆದರೆ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ ಬೌಲರ್ ನಸೀಮ್ ಶಾ 40 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿ ತಂಡವನ್ನು 203 ರನ್‌ಗಳಿಗೆ ಕೊಂಡೊಯ್ದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 3 ಹಾಗೂ ನಾಯಕ ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.

ಆಸ್ಟ್ರೇಲಿಯಾಕ್ಕೂ ಆಘಾತ ನೀಡಿದ ಪಾಕ್ ವೇಗಿಗಳು

203 ರನ್​ಗಳ ಅಲ್ಪ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ನಾಲ್ಕನೇ ಓವರ್‌ನಲ್ಲಿಯೇ ಆರಂಭಿಕರಾದ ಮ್ಯಾಥ್ಯೂ ಶಾರ್ಟ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಜೊತೆಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಉತ್ತಮ ಜೊತೆಯಾಟ ಕಟ್ಟಿದರು. ಇಬ್ಬರೂ ಸೇರಿ ಪಾಕಿಸ್ತಾನದ ವೇಗದ ಬೌಲರ್‌ಗಳ ಮೇಲೆ ದಾಳಿ ನಡೆಸಿ ವೇಗವಾಗಿ ರನ್ ಗಳಿಸಿದರು. ಇವರಿಬ್ಬರ ನಡುವೆ 85 ರನ್​ಗಳ ಜೊತೆಯಾಟವಿದ್ದು, ಆಸ್ಟ್ರೇಲಿಯಾ ಗೆಲುವಿಗೆ ಅಡಿಪಾಯ ಹಾಕಿತು.

ಈ ಇಬ್ಬರು ಆಡುವವರೆಗೆ ಆಸ್ಟ್ರೇಲಿಯ ತಂಡ ಗೆಲುವಿನ ಸನಿಹದಲ್ಲಿದ್ದಂತೆ ಕಂಡರೂ ಇದ್ದಕ್ಕಿದ್ದಂತೆ ಹಾರಿಸ್ ರೌಫ್ ಮತ್ತು ಶಾಹೀನ್ ಶಾ ಆಫ್ರಿದಿ ಸ್ಮಿತ್-ಇಂಗ್ಲಿಸ್ ಸೇರಿದಂತೆ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಹೀಗಾಗಿ ಆಸ್ಟ್ರೇಲಿಯಾ ಕೇವಲ 155 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ನಾಯಕ ಪ್ಯಾಟ್ ಕಮಿನ್ಸ್ ಜವಾಬ್ದಾರಿ ವಹಿಸಿಕೊಂಡು ಮಿಚೆಲ್ ಸ್ಟಾರ್ಕ್ ಜೊತೆಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕಮ್ಮಿನ್ಸ್ 33 ರನ್ ಗಳಿಸಿ ಅಜೇಯರಾಗಿ ಮರಳಿದರು. ಇತ್ತ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಸೋಲಿಸುತ್ತವೆ ಎಂದು ಹೇಳಿಕೆ ನೀಡಿದ್ದ ನೂತನ ನಾಯಕ ಮೊಹಮ್ಮದ್ ರಿಜ್ವಾನ್ ಅವರ ನಾಯಕಗತ್ವದ ಹೊಸ ಇನ್ನಿಂಗ್ಸ್ ಸೋಲಿನೊಂದಿಗೆ ಆರಂಭವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Mon, 4 November 24