
T20 World Cup 2026: ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಝಿಂಬಾಬ್ವೆ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 169 ರನ್ಗಳು ಮಾತ್ರ.
ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮ್ಯಾಟ್ ರೆನ್ಶಾ 65 ರನ್ ಸಿಡಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಆಸೀಸ್ ಪಡೆ 19.3 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ 23 ರನ್ಗಳಿಂದ ಆಸ್ಟ್ರೇಲಿಯಾ ಸೋಲೊಪ್ಪಿಕೊಂಡಿದೆ.
ಈ ಸೋಲಿನೊಂದಿಗೆ ಆಸ್ಟ್ರೇಲಿಯಾಗೆ ಸೂಪರ್-8 ಹಂತದ ಹಾದಿಯು ತುಸು ಕಷ್ಟಕರವಾಗಿ ಪರಿಣಮಿಸಿದೆ. ಏಕೆಂದರೆ ಆಸೀಸ್ ಪಡೆಯುವ ಮುಂದಿನ ಹಂತಕ್ಕೇರಲು ಮುಂದಿನ ಎರಡು ಮ್ಯಾಚ್ಗಳಲ್ಲೂ ಜಯ ಸಾಧಿಸಬೇಕು. ಒಂದು ವೇಳೆ ಇನ್ನೊಂದು ಪಂದ್ಯದಲ್ಲಿ ಸೋತರೆ ಆಸ್ಟ್ರೇಲಿಯಾದ ಲೆಕ್ಕಾಚಾರಗಳೇ ತಲೆ ಕೆಳಗಾಗಲಿದೆ.
ಈ ಎರಡು ಗೆಲುವುಗಳ ಹೊರತಾಗಿಯೂ ಆಸ್ಟ್ರೇಲಿಯಾ ನೇರವಾಗಿ ಸೂಪರ್-8 ಹಂತಕ್ಕೇರುವುದಿಲ್ಲ. ಏಕೆಂದರೆ ಅತ್ತ ಶ್ರೀಲಂಕಾ ಹಾಗೂ ಝಿಂಬಾಬ್ವೆ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ಈ ಎರಡೂ ತಂಡಗಳಿಗೂ ಇನ್ನೂ 2 ಪಂದ್ಯಗಳಿವೆ. ಹೀಗಾಗಿ ಈ ಟೀಮ್ಗಳು ಕೂಡ 6 ಅಂಕಗಳನ್ನು ಪಡೆಯಲು ಉತ್ತಮ ಅವಕಾಶವಿದೆ.
ಇಲ್ಲಿ ಆಸ್ಟ್ರೇಲಿಯಾ, ಝಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ತಲಾ 6 ಅಂಕಗಳನ್ನು ಪಡೆದರೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.
ಮುಂದಿನ ಎರಡು ಮ್ಯಾಚ್ಗಳಲ್ಲಿ ಆಸ್ಟ್ರೇಲಿಯಾ ಪಾಲಿಗೆ ಗೆಲುವು ಅನಿವಾರ್ಯ. ಒಂದು ವೇಳೆ ಶ್ರೀಲಂಕಾ ವಿರುದ್ಧ ಸೋತರೆ ಆಸೀಸ್ ಪಡೆ ಟಿ20 ವಿಶ್ವಕಪ್ನಿಂದ ಹೊರಬೀಳುವುದು ಬಹುತೇಕ ಖಚಿತ. ಏಕೆಂದರೆ ಆಸೀಸ್ ವಿರುದ್ಧ ಗೆದ್ದರೆ ಶ್ರೀಲಂಕಾ 6 ಅಂಕಗಳನ್ನು ಪಡೆಯುವುದಲ್ಲದೇ ತನ್ನ ನೆಟ್ ರನ್ ರೇಟ್ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ.
ಅತ್ತ ಸೋಲುವ ಆಸ್ಟ್ರೇಲಿಯಾ ತಂಡದ ನೆಟ್ ರನ್ ರೇಟ್ ಕುಸಿಯಲಿದೆ. ಇದರ ನಡುವೆ ಝಿಂಬಾಬ್ವೆ ತಂಡವು ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳೊಂದಿಗೆ ನೆಟ್ ರನ್ ರೇಟ್ ಅನ್ನು ವೃದ್ಧಿಸಿಕೊಳ್ಳಲಿದೆ. ಇದರಿಂದ ಕೊನೆಯ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೂ ನೆಟ್ ರನ್ ರೇಟ್ನಲ್ಲಿ ಹಿಂದೆ ಉಳಿಯುವ ಸಾಧ್ಯತೆ ಹೆಚ್ಚು.
ಅಂದರೆ ಆಸ್ಟ್ರೇಲಿಯಾ ತಂಡವು ಸೂಪರ್-8 ಹಂತಕ್ಕೇರಬೇಕಿದ್ದರೆ ಮುಂದಿನ ಎರಡು ಮ್ಯಾಚ್ಗಳಲ್ಲಿ ಗೆಲ್ಲುವುದರ ಜೊತೆಗೆ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಿರುವುದು ಅನಿವಾರ್ಯ. ಇದರಲ್ಲಿ ಒಂದು ಪಂದ್ಯ ಸೋತರೂ ಆಸೀಸ್ ಪಡೆ ಟಿ20 ವಿಶ್ವಕಪ್ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.
ಇದನ್ನೂ ಓದಿ: IND vs PAK: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ?
ಅಂದರೆ ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಮುಂದಿನ ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ, ಆಸ್ಟ್ರೇಲಿಯಾ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲು ಎರಡೂ ಮ್ಯಾಚ್ಗಳಲ್ಲೂ ಕನಿಷ್ಠ 50 ರನ್ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಇಲ್ಲದಿದ್ದರೆ ಮೂರನೇ ಸ್ಥಾನದೊಂದಿಗೆ ಟಿ20 ವಿಶ್ವಕಪ್ನಿಂದ ಹೊರಬೀಳುವುದು ಬಹುತೇಕ ಖಚಿತ.
Published On - 9:33 am, Sat, 14 February 26