RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್

IPL 2026 KKR vs DC: ಇಂಡಿಯನ್ ಪ್ರೀಮಿಯರ್ ಲೀಗ್​ನ ಕೊನೆಯ ಲೀಗ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18. 4 ಓವರ್​ಗಳಲ್ಲಿ 163 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 40 ರನ್​ಗಳ ಜಯ ಸಾಧಿಸಿದೆ.

RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್
Axar Patel
Image Credit source: BCCI

Updated on: May 25, 2026 | 11:33 AM

IPL 2026: ಐಪಿಎಲ್ 2026ರ ಲೀಗ್ ಹಂತದ ರೋಚಕ ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ಲೇಆಫ್ ಹಂತದ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ಈ ಮಹತ್ವದ ಘಟ್ಟಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ನಾಯಕ ಅಕ್ಷರ್ ಪಟೇಲ್ ಅವರು ನೀಡಿರುವ ಒಂದು ಹೇಳಿಕೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ  ಪಂದ್ಯದಲ್ಲಿ ಕೆಕೆಆರ್ ವಿರುದ್ಧ 40 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಮಾತನಾಡಿದ ಅಕ್ಷರ್, ಮುಂಬರುವ ಪ್ಲೇಆಫ್‌ನಲ್ಲಿರುವ ಬಲಿಷ್ಠ ತಂಡ ಯಾವುದೆಂದು ಹೆಸರಿಸಿದ್ದಾರೆ.

ಪ್ಲೇಆಫ್​ನಲ್ಲಿ ಕಾಣಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂದ್ಯಗಳನ್ನಾಡಿದೆ. ಈ ತಂಡಗಳಲ್ಲಿ ಯಾವ ಟೀಮ್ ಬಲಿಷ್ಠ ಎಂಬ ಪ್ರಶ್ನೆಯನ್ನು ಅಕ್ಷರ್ ಪಟೇಲ್ ಮುಂದಿಡಲಾಗಿತ್ತು. ಇದಕ್ಕೆ ಮರು ಯೋಜಿಸದೇ ಅಕ್ಷರ್ ಪಟೇಲ್ ನೀಡಿದ ಉತ್ತರ- ಸನ್‌ರೈಸರ್ಸ್ ಹೈದರಾಬಾದ್ (SRH)

ಅಕ್ಷರ್ ಪಟೇಲ್ ಮಾತುಗಳಲ್ಲೇ ಹೇಳುವುದಾದರೆ…

“ನನ್ನ ಪ್ರಕಾರ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಆ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಮ್ಮೆ ರನ್ ಗಳಿಸಲು ಆರಂಭಿಸಿದರೆ, ಎದುರಾಳಿ ಬೌಲರ್‌ಗಳಿಗೆ ಅವರನ್ನು ತಡೆಯುವುದು ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಪ್ಲೇಆಫ್‌ನಲ್ಲಿ ಅವರೇ ಅತ್ಯಂತ ಬಲಿಷ್ಠ ತಂಡ.” ಎಂದು ತಿಳಿಸಿದ್ದಾರೆ.

SRH ‘ಟಾಪ್ 3’ ಬ್ಯಾಟರ್‌ಗಳು:

ಅಕ್ಷರ್ ಪಟೇಲ್ ಅವರ ಈ ಮಾತುಗಳಿಗೆ ಈ ಸೀಸನ್‌ನ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ. ಪ್ರಸ್ತುತ ಐಪಿಎಲ್​ನಲ್ಲಿ SRH ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಧೂಳೆಬ್ಬಿಸುತ್ತಿದ್ದಾರೆ…

  • ಅಭಿಷೇಕ್ ಶರ್ಮಾ: ಸನ್​ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ 563 ರನ್ ಕಲೆಹಾಕಿದ್ದಾರೆ.
  • ಇಶಾನ್ ಕಿಶನ್: ಎಸ್​ಆರ್​ಹೆಚ್​ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಈವರೆಗೆ ಬಾರಿಸಿರುವುದು ಬರೋಬ್ಬರಿ 569 ರನ್​ಗಳು.
  • ಹೆನ್ರಿಕ್ ಕ್ಲಾಸೆನ್: ಸನ್​ರೈಸರ್ಸ್ ಹೈದರಾಬಾದ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಹೆನ್ರಿಕ್ ಕ್ಲಾಸೆನ್ 606 ರನ್​ಗಳಿಸಿ ಅಬ್ಬರಿಸಿದ್ದಾರೆ.

ಇಲ್ಲಿ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಭರ್ಜರಿ ಬ್ಯಾಟಿಂಗ್​ನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹೀಗಾಗಿಯೇ ಅಕ್ಷರ್ ಪಟೇಲ್ ಸನ್​ರೈಸರ್ಸ್ ಹೈದರಾಬಾದ್​ನ ಟಾಪ್ ಬ್ಯಾಟರ್​ಗಳು ಡೇಂಜರಸ್. ಅವರ ಒಮ್ಮೆ ಕ್ರೀಸ್ ಕಚ್ಚಿ ನಿಂತರೆ ನಿಯಂತ್ರಿಸುವುದು ಕಷ್ಟ ಎಂದಿದ್ದಾರೆ. ಇದೇ ಕಾರಣದಿಂದಾಗಿ ಸನ್​ರೈಸರ್ಸ್ ಹೈದರಾಬಾದ್​ ತಂಡವು ಪ್ಲೇಆಫ್​ನಲ್ಲಿರುವ ಬಲಿಷ್ಠ ತಂಡ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್ ಎದುರಾಳಿ ಯಾರು?

18 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ಎದುರಾಳಿ ರಾಜಸ್ಥಾನ್ ರಾಯಲ್ಸ್. ಆರ್​ಆರ್ ವಿರುದ್ಧ ಗೆದ್ದರೆ ಎಸ್​ಆರ್​ಹೆಚ್ ದ್ವಿತೀಯ ಕ್ವಾಲಿಫೈಯರ್​ಗೇರಲಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡದೊಡನೆ ಮುಖಾಮುಖಿಯಾಗಲಿದೆ.

ಇದನ್ನೂ ಓದಿ:  IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಇಲ್ಲಿದೆ

ಅಂದರೆ ಎಲಿಮಿನೇಟರ್ ಪಂದ್ಯವಾಡುವ ತಂಡವು ಎರಡು ಪಂದಗಳಲ್ಲಿ ಜಯ ಸಾಧಿಸಿದರೆ ಮಾತ್ರ ಫೈನಲ್​ಗೆ ಅರ್ಹತೆ ಪಡೆಯಲಿದೆ. ಅತ್ತ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ಪಾಲಿಗೆ ಮುಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.

 

Published On - 8:35 am, Mon, 25 May 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us