Babar Azam: ಶತಕದೊಂದಿಗೆ ವಿಶ್ವ ದಾಖಲೆ ಬರೆದ ಬಾಬರ್ ಆಜಂ
Babar Azam: ಬಾಬರ್ ಆಜಂ ಆಸ್ಟ್ರೇಲಿಯಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ 115 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಬಾರಿಸಿ ಮಿಂಚಿದ್ದರು.
ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಇತಿಹಾಸ ನಿರ್ಮಿಸಿದ್ದಾರೆ. ಬಾಬರ್ ತಮ್ಮ ODI ವೃತ್ತಿಜೀವನದ 16 ನೇ ಶತಕವನ್ನು ಬಾರಿಸುವ ಮೂಲಕ ಹೊಸ ದಾಖಲೆ ಬರೆದರು. ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಅವರೊಂದಿಗೆ ಎರಡನೇ ವಿಕೆಟ್ಗೆ 190 ರನ್‌ಗಳ ಜೊತೆಯಾಟವಾಡುವ ಮೂಲಕ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಅಲ್ಲದೆ ಪಾಕ್ ತಂಡವು ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಶತಕ ಬಾರಿಸಿದ ಬಾಬರ್ ಏಕದಿನ ಪಂದ್ಯಗಳಲ್ಲಿ ಅತೀ ವೇಗವಾಗಿ 16 ಶತಕಗಳನ್ನು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
27 ವರ್ಷ ಬಾಬರ್ ಆಜಂ 84 ಇನ್ನಿಂಗ್ಸ್‌ಗಳಲ್ಲಿ 16ನೇ ಶತಕ ಪೂರೈಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ದಂತಕಥೆ ಹಾಶೀಮ್ ಆಮ್ಲಾ ಅವರ ದಾಖಲೆಯನ್ನು ಮುರಿದರು. ಹಾಶೀಮ್ ಆಮ್ಲಾ 94 ಇನ್ನಿಂಗ್ಸ್‌ಗಳಲ್ಲಿ 16ನೇ ಶತಕವನ್ನು ಗಳಿಸಿ ದಾಖಲೆ ಬರೆದಿದ್ದರು. ಇದಕ್ಕೂ ಮುನ್ನ ಬಾಬರ್ ಏಕದಿನದಲ್ಲಿ ಅತಿ ವೇಗದಲ್ಲಿ 7ನೇ, 13ನೇ, 14ನೇ ಮತ್ತು 15ನೇ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಮತ್ತೊಂದು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಬರ್ ಆಕರ್ಷಕ ಶತಕ: ಬಾಬರ್ ಆಜಂ ಆಸ್ಟ್ರೇಲಿಯಾ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ 115 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಬಾರಿಸಿ ಮಿಂಚಿದ್ದರು. ಇನ್ನು ಇಮಾಮ್-ಉಲ್-ಹಕ್ 100 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ ಅಜೇಯ 89 ರನ್ ಗಳಿಸಿದರು. ಪ್ರಸಕ್ತ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರೂ 96 ಹಾಗೂ ಎರಡನೇ ಏಕದಿನದಲ್ಲಿ 111 ರನ್‌ಗಳ ಜೊತೆಯಾಟ ಆಡಿರುವುದು ವಿಶೇಷ.
ಈ ವೇಳೆ ಬಾಬರ್ ಅಜಮ್ ಪಾಕ್ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ಅವರ ದಾಖಲೆಯನ್ನೂ ಕೂಡ ಮುರಿದಿದ್ದಾರೆ. ಬಾಬರ್ ಅಜಮ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಈಗ 84 ಇನ್ನಿಂಗ್ಸ್‌ಗಳಲ್ಲಿ 16 ಶತಕಗಳನ್ನು ಹೊಂದಿದ್ದಾರೆ. ಈ ಮೂಲಕ 267 ಇನ್ನಿಂಗ್ಸ್‌ಗಳಲ್ಲಿ 15 ODI ಶತಕಗಳನ್ನು ಗಳಿಸಿದ ದಂತಕಥೆ ಮೊಹಮ್ಮದ್ ಯೂಸುಫ್ ಅವರನ್ನು ಹಿಂದಿಕ್ಕಿದರು. ಈ ಪಟ್ಟಿಯಲ್ಲಿ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಮೊದಲ ಸ್ಥಾನದಲ್ಲಿದ್ದಾರೆ. ಅನ್ವರ್ 244 ಇನ್ನಿಂಗ್ಸ್‌ಗಳಲ್ಲಿ 20 ಏಕದಿನ ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು