ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾ ತಂಡ ಪ್ರಕಟ; ಅನುಭವಿಗಳಿಗೆ ಮಣೆಹಾಕಿದ ಮಂಡಳಿ
Bangladesh Test squad: ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡದಲ್ಲಿ ಶಕೀಬ್ ಅಲ್ ಹಸನ್, ಲಿಟನ್ ದಾಸ್ ಮತ್ತು ತಸ್ಕಿನ್ ಅಹ್ಮದ್ ಸೇರಿದಂತೆ ಹಲವು ಅನುಭವಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಬಹಳ ದಿನಗಳ ನಂತರ ಮುಶ್ಫಿಕರ್ ರಹೀಮ್ ಮತ್ತು ತಸ್ಕಿನ್ ಅಹ್ಮದ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಇದೇ ಆಗಸ್ಟ್ 21 ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದೆ. ಪಾಕಿಸ್ತಾನ ಈ ಸರಣಿಯನ್ನು ತವರಿನಲ್ಲಿ ಆಡಲಿದ್ದು, ಇದಕ್ಕಾಗಿ ಈಗಾಗಲೇ ತನ್ನ ತಂಡವನ್ನು ಪ್ರಕಟಿಸಿದೆ. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಅಡಿಯಲ್ಲಿ ಆಡುವ ಈ ಸರಣಿಗೆ 16 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ನಜ್ಮುಲ್ ಹುಸೇನ್ ಶಾಂಟೊ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದು, ಈ ತಂಡದಲ್ಲಿ ಒಟ್ಟು 5 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ.ಅದೇ ವೇಳೆ ಸ್ಟಾರ್ ಆಟಗಾರರೂ ತಂಡಕ್ಕೆ ಮರಳಿದ್ದಾರೆ.
ಅನುಭವಿಗಳಿಗೆ ಅವಕಾಶ
ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡದಲ್ಲಿ ಶಕೀಬ್ ಅಲ್ ಹಸನ್, ಲಿಟನ್ ದಾಸ್ ಮತ್ತು ತಸ್ಕಿನ್ ಅಹ್ಮದ್ ಸೇರಿದಂತೆ ಹಲವು ಅನುಭವಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಬಹಳ ದಿನಗಳ ನಂತರ ಮುಶ್ಫಿಕರ್ ರಹೀಮ್ ಮತ್ತು ತಸ್ಕಿನ್ ಅಹ್ಮದ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ವಾಸ್ತವವಾಗಿ ಹೆಬ್ಬೆರಳಿನ ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಮುಶ್ಫಿಕರ್ ಹೊರಗುಳಿದಿದ್ದರೆ, ಇತ್ತ ತಸ್ಕಿನ್ ಅಹ್ಮದ್ ಕೂಡ ಭುಜದ ಗಾಯದಿಂದ ಚೇತರಿಸಿಕೊಳ್ಳುವ ಸಲುವಾಗಿ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದರು. ಈಗ ಈ ಇಬ್ಬರೂ ಸ್ಟಾರ್ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
ಟೆಸ್ಟ್ ಸರಣಿ ವೇಳಾಪಟ್ಟಿ
ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ರಾವಲ್ಪಿಂಡಿಯಲ್ಲಿ ಆಗಸ್ಟ್ 21 ಮತ್ತು 25 ರ ನಡುವೆ ನಡೆಯಲಿದ್ದು, ಎರಡನೇ ಪಂದ್ಯವು ಕರಾಚಿಯಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರ ನಡುವೆ ನಡೆಯಲಿದೆ. ಬಾಂಗ್ಲಾದೇಶ ಎ ತಂಡದೊಂದಿಗೆ ಟೆಸ್ಟ್ ತಂಡದ ಆರು ಆಟಗಾರರು ಶನಿವಾರ ಪಾಕಿಸ್ತಾನ ತಲುಪಿದ್ದಾರೆ. ಉಳಿದ ಆಟಗಾರರು ಕೂಡ ಆಗಸ್ಟ್ 13 ರಂದು ಪಾಕಿಸ್ತಾನಕ್ಕೆ ತೆರಳಿ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲಿದ್ದಾರೆ. ವಾಸ್ತವವಾಗಿ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಾಗರಿಕ ಅಶಾಂತಿಯಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ರಾವಲ್ಪಿಂಡಿಯಲ್ಲಿ ಎಲ್ಲಾ ಅಗತ್ಯ ತರಬೇತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಬಾಂಗ್ಲಾದೇಶಕ್ಕೆ ಸ್ವಲ್ಪ ಸಮಯದವರೆಗೆ ಆತಿಥ್ಯ ವಹಿಸಲು ಮುಂದಾಗಿತ್ತು. ಇದನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಒಪ್ಪಿಕೊಂಡಿತ್ತು.
ಟೆಸ್ಟ್ ಮುಖಾಮುಖಿ ವರದಿ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ 6 ಟೆಸ್ಟ್ ಸರಣಿಗಳು ನಡೆದಿವೆ. ಆದರೆ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಇತಿಹಾಸವನ್ನು ಸೃಷ್ಟಿಸುವ ಅವಕಾಶವಿದೆ. ಏಕೆಂದರೆ ಪಾಕಿಸ್ತಾನ ತಂಡವು ಸದ್ಯಕ್ಕೆ ಲಯದಲ್ಲಿಲ್ಲ. ಒಟ್ಟಾರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ 13 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 12 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಬಾಂಗ್ಲಾದೇಶ ತಂಡ ಒಂದೇ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಾಂಗ್ಲಾದೇಶ ಟೆಸ್ಟ್ ತಂಡ ಇಂತಿದೆ
ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಜಾಕಿರ್ ಹಸನ್, ಶದ್ಮನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ಕುಮಾರ್ ದಾಸ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ಹಸನ್ ತಸ್ಕಿನ್ ಅಹ್ಮದ್ ಮತ್ತು ಸೈಯದ್ ಖಾಲಿದ್ ಅಹ್ಮದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ