
ಸಿಲ್ಹೆಟ್ನಲ್ಲಿ ನಡೆದ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಹೈ-ಡ್ರಾಮಾ ನಡೆದಿದೆ. ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ವರ್ತನೆಗೆ ಬೇಸತ್ತ ಬಾಂಗ್ಲಾದೇಶ್ರ ಆಟಗಾರರು, ಬಾಲಿವುಡ್ನ ಪ್ರಸಿದ್ಧ ‘ಹೇರಾ ಫೇರಿ’ ಸಿನಿಮಾದ ಡೈಲಾಗ್ ಬಳಸಿ ಮೈದಾನದಲ್ಲೇ ಕಾಲೆಳೆದಿದ್ದಾರೆ.
ಪಾಕಿಸ್ತಾನ್ ತಂಡವು 437 ರನ್ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದಾಗ, 72ನೇ ಓವರ್ನಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಬೌಲಿಂಗ್ ಮಾಡಲು ಬಂದರು. ಈ ವೇಳೆ ಸೈಟ್ಸ್ಕ್ರೀನ್ ಬಳಿ ಏನೋ ತೊಂದರೆಯಾಗಿದೆ ಎಂದು ರಿಝ್ವಾನ್ ಕೊನೆ ಕ್ಷಣದಲ್ಲಿ ಕ್ರೀಸ್ನಿಂದ ಹಿಂದೆ ಸರಿದರು.
ರಿಝ್ವಾನ್ ಪದೇ ಪದೇ ಹೀಗೆ ಸಮಯ ವ್ಯರ್ಥ ಮಾಡುತ್ತಿರುವುದನ್ನು ಕಂಡು ಸಿಟ್ಟಾದ ಬಾಂಗ್ಲಾದೇಶ್ ವಿಕೆಟ್ ಕೀಪರ್ ಲಿಟನ್ ದಾಸ್, “ನಿಮ್ಮ ಸಮಸ್ಯೆಯಾದರೂ ಏನು? ನಿರಂತರವಾಗಿ ಬೌಲರ್ಗೆ ತೊಂದರೆ ಕೊಡುತ್ತಿದ್ದೀರಿ” ಎಂದು ಆಕ್ರೋಶ ಹೊರಹಾಕಿದರು.
ಇದರೊಂದಿಗೆ ಮೊಹಮ್ಮದ್ ರಿಝ್ವಾನ್ ಹಾಗೂ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ಶುರುವಾಯಿತು. ಈ ವೇಳೆ ಅಂಪೈರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಆ ಬಳಿಕ ಶುರುವಾಗಿದ್ದೇ ಅಸಲಿ ಟ್ರೋಲ್.
“50 ರನ್ ಮುಗಿಯಿತು, ಇನ್ನು ಆ್ಯಕ್ಟಿಂಗ್ ಶುರು” ಎಂದು ಲಿಟ್ಟನ್ ದಾಸ್ ರಿಝ್ವಾನ್ಗೆ ಟಾಂಗ್ ನೀಡಿದರು. ಇನ್ನು ಕೇಳಿಸಿಕೊಂಡ ಪಾಕ್ ಆಟಗಾರ ಓವರ್ ಮುಗಿದ ನಂತರ ಅಂಪೈರ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Vaibhav Sooryavanshi: ಸರ್, ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ..!
ಇದೇ ಸಮಯವನ್ನು ಬಳಸಿಕೊಂಡ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೊ ಮತ್ತು ಇತರ ಫೀಲ್ಡರ್ಗಳು ರಿಝ್ವಾನ್ ಅವರ ಕಾಲೆಳೆಯಲು ಬಾಲಿವುಡ್ ಡೈಲಾಗ್ಗಳನ್ನು ಬಳಸಿದ್ದಾರೆ.
ಹೀಗೆ ಹಾಸ್ಯಮಯವಾಗಿ ಮೊಹಮ್ಮದ್ ರಿಝ್ವಾನ್ ಅವರನ್ನು ಕಾಲೆಳೆಯುವ ಮೂಲಕ ಬಾಂಗ್ಲಾದೇಶ್ ಆಟಗಾರರು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಒದಗಿಸಿದ್ದಾರೆ. ಇದೀಗ ಈ ಸ್ಲೆಡ್ಜಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಂಗ್ಲಾದೇಶ್ ಆಟಗಾರರ ಹಾಸ್ಯಪ್ರಜ್ಞೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Published On - 1:40 pm, Wed, 20 May 26