Vaibhav Sooryavanshi: ಸರ್, ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ..!
IPL 2026 RR vs LSG: ಇಂಡಿಯನ್ ಪ್ರೀಮಿಯರ್ ಲೀಗ್ನ 64ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿದ್ದರು. ಈ ಬೃಹತ್ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಟಿ20 ಕ್ರಿಕೆಟ್ ಅಂದರೆ ಕೇವಲ ಅಬ್ಬರವಲ್ಲ, ಅದೊಂದು ಲೆಕ್ಕಾಚಾರದ ಆಟ ಎಂಬುದನ್ನು 15 ವರ್ಷದ ಹರೆಯದ ವೈಭವ್ ಸೂರ್ಯವಂಶಿ (Vaibhav Sooryavanshi) ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ! ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ರಾಜಸ್ಥಾನ್ ರಾಯಲ್ಸ್ ಒತ್ತಡಕ್ಕೆ ಸಿಲುಕಬಹುದು ಎಂಬ ಪ್ರೇಕ್ಷಕರ ಲೆಕ್ಕಾಚಾರವನ್ನು ಯುವ ದಾಂಡಿಗ ತಲೆಕೆಳಗಾಗಿಸಿದ್ದಾನೆ. ಅದು ಕೂಡ ಕೇವಲ 38 ಎಸೆತಗಳಲ್ಲಿ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
- ಆರೆಂಜ್ ಕ್ಯಾಪ್ ಒಡೆಯ: ಪ್ರಸಕ್ತ ಸರಣಿಯಲ್ಲಿ 13 ಇನ್ನಿಂಗ್ಸ್‌ಗಳಿಂದ ಒಟ್ಟು 579 ರನ್ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಸದ್ಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
- 500 ರನ್‌ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ (15 ವರ್ಷ) 500 ರನ್‌ಗಳ ಗಡಿ ದಾಟಿದ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
- ಸಿಕ್ಸರ್‌ಗಳ ಸರದಾರ: ಒಂದೇ ಸೀಸನ್‌ನಲ್ಲಿ 50 ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಹಾಗೂ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ.
ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಮೈದಾನದ ಹೊರಗಿನ ಪ್ರಶಂಸೆ ಹಾಗೂ ಒತ್ತಡವನ್ನು ತಾವು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ:
ಗಾಬರಿಯಿಲ್ಲದ ನಿಧಾನಗತಿಯ ಆರಂಭ:
“ನಾನು ಬೌಲಿಂಗ್ ಇನ್ನಿಂಗ್ಸ್ ವೇಳೆ ಹೊರಗೆ ಕುಳಿತು ಪಿಚ್ ಗಮನಿಸುತ್ತಿದ್ದೆ. ವಿಕೆಟ್ ಬ್ಯಾಟಿಂಗ್‌ಗೆ ಸಹಕಾರಿಯಾಗಿದೆ ಎಂಬುದು ತಿಳಿಯಿತು. ಆರಂಭದಲ್ಲೇ ಅವಸರ ಮಾಡದೆ, ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು ದೀರ್ಘ ಇನ್ನಿಂಗ್ಸ್ ಆಡಬೇಕು ಎಂದು ನಿರ್ಧರಿಸಿದ್ದೆ. ನಾನು ಯಾವಾಗ ಬೇಕಾದರೂ ಸಿಕ್ಸರ್, ಫೋರ್ ಹೊಡೆಯಬಲ್ಲೆ ಎಂಬ ನಂಬಿಕೆ ನನಗಿತ್ತು. ಹಾಗಾಗಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಯೋಜನೆಯಾಗಿತ್ತು ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ದೂರ:
“ಸರ್, ನನಗೆ ಸಿಗುತ್ತಿರುವ ಪ್ರಚಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದಿನಪತ್ರಿಕೆಗಳನ್ನು ಓದುವುದಿಲ್ಲ, ಸಾಮಾಜಿಕ ಜಾಲತಾಣಗಳನ್ನೂ ನೋಡುವುದಿಲ್ಲ. ಇದು ಕೇವಲ ಆರಂಭವಷ್ಟೇ. ನನ್ನ ವೃತ್ತಿಜೀವನ ಸುದೀರ್ಘವಾಗಿದ್ದರೆ ಜನರು ಇನ್ನೂ ಏನೇನೋ ಮಾತನಾಡುತ್ತಾರೆ. ನನ್ನ ಗಮನ ಕೇವಲ ಕ್ರಿಕೆಟ್‌ನ ಮೇಲಿರಬೇಕು. ಹೀಗಾಗಿ ಇಂತಹವುಗಳ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ” ಎಂದು ವೈಭವ್ ಹೇಳಿದ್ದಾರೆ.
ಅರ್ಥವಿಲ್ಲದ ವಿಚಿತ್ರ ಸಂಭ್ರಮ:
ಇನ್ನು ಅರ್ಧಶತಕದ ಬಳಿಕ ಅವರು ಮಾಡಿದ ವಿಶಿಷ್ಟ ಕೈ ಸನ್ನೆಯ ಆಚರಣೆಯ ಬಗ್ಗೆ ಕೇಳಿದಾಗ, “ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಹೊಸದನ್ನು ಪ್ರಯತ್ನಿಸುತ್ತೇನೆ, ಅಷ್ಟೇ,” ಎಂದು ನಗುತ್ತಾ ಉತ್ತರಿಸಿದ್ದರು. ಆ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಅದು ತಾಯಿಯ ಹೆಸರಿನ ಮೊದಲಾಕ್ಷ (A- ಆರತಿ) ತೋರಿಸಿದ ಸಂಭ್ರಮವಾಗಿತ್ತು ಎಂದು ತಿಳಿಸಿದ್ದಾರೆ.
ಮುಂದಿನ ಗುರಿ ಪ್ಲೇ-ಆಫ್:
“ನಮ್ಮ ತಂಡದ ಗಮನ ಈಗ ಮುಂದಿನ ಪಂದ್ಯದ ಮೇಲಿದೆ. ಯಾವುದೇ ಒತ್ತಡವಿಲ್ಲದೆ, ಟೂರ್ನಿ ಆರಂಭದಿಂದ ಆಡಿದಂತೆಯೇ ಆಟವನ್ನು ಆನಂದಿಸುತ್ತಾ ಕ್ರಿಕೆಟ್ ಆಡುವುದು ಮತ್ತು ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿ.” ಈ ಮೂಲಕ ಮುಂದಿನ ಮ್ಯಾಚ್ನಲ್ಲಿ ಗೆದ್ದು ಪ್ಲೇಆಫ್ಗೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!
ಒಟ್ಟಾರೆಯಾಗಿ ಹೇಳುವುದಾದರೆ, 15ರ ಹರೆಯದ ವೈಭವ್ ಸೂರ್ಯವಂಶಿ ಅವರ ಈ ಆಟ ಮತ್ತು ಮಾತುಗಳು ಕೇವಲ ರನ್‌ಗಳ ಗಳಿಕೆಯಷ್ಟೇ ಅಲ್ಲ, ಭಾರತೀಯ ಕ್ರಿಕೆಟ್‌ಗೆ ಒಬ್ಬ ಜವಾಬ್ದಾರಿಯುತ ಮತ್ತು ಅಪಾರ ಮಾನಸಿಕ ಪ್ರಬುದ್ಧತೆಯುಳ್ಳ ಆಟಗಾರ ಸಿಕ್ಕಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮೈದಾನದ ಹೊರಗಿನ ಅತಿಯಾದ ಪ್ರಚಾರ ಮತ್ತು ಒತ್ತಡಗಳಿಗೆ ಕಿವಿಗೊಡದೆ, ಕೇವಲ ತನ್ನ ಆಟದ ಮೇಲೆ ಗಮನ ಹರಿಸುವ ಅವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ.
ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿರುವ ಈ ‘ರನ್ ಮಷಿನ್’, ಮುಂಬರುವ ಪಂದ್ಯಗಳಲ್ಲೂ ಇದೇ ರೀತಿ ಅಬ್ಬರಿಸಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲಿ ಎಂಬುದೇ ಅಭಿಮಾನಿಗಳ ಆಶಯ.

