ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ
'ಜಂತರ್ ಮಂತರ್‌ನ ಸೀಸನ್ 2' ಅತ್ಯಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭೀಜಿತ್ ದಿಪ್ಕೆ ಹೇಳಿದ್ದಾರೆ. ಜಂತರ್ ಮಂತರ್ ಪ್ರತಿಭಟನೆಯ ಎರಡನೇ ಸೀಸನ್ ಯಾವಾಗ ಆರಂಭವಾಗುತ್ತದೆ ಎಂದು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಜನರು ತಮ್ಮನ್ನು ಕೇಳುತ್ತಿದ್ದಾರೆ ಎಂದ ಅವರು, ಮತ್ತೊಂದು ಭಾರಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಆದರೆ ಸಿಜೆಪಿ ಸಂಘಟನೆಯು ಈ ಬಾರಿ ಯಾವ ವಿಷಯವನ್ನು ಕೈಗೆತ್ತಿಕೊಳ್ಳಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ನವದೆಹಲಿ, ಆಗಸ್ಟ್ 12: ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ಮತ್ತೊಂದು ಬೃಹತ್ ಪ್ರತಿಭಟನಾ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಇದನ್ನು “ಜಂತರ್ ಮಂತರ್‌ನ ಸೀಸನ್ 2” ಎಂದು ಕರೆದಿದ್ದಾರೆ. ದೆಹಲಿಯ ನಾರಾಯಣದಲ್ಲಿ ಆಯೋಜಿಸಲಾಗಿದ್ದ ಸಿಜೆಪಿ ಕಾರ್ಯಕರ್ತರ ಸಭೆಯ ಬುಕ್ಕಿಂಗ್ ಅನ್ನು ಬ್ಯಾಂಕ್ವೆಟ್ ಹಾಲ್ ಮಾಲೀಕರು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ ನಂತರ ಈ ಘೋಷಣೆ ಹೊರಬಿದ್ದಿದೆ. ಬಿಜೆಪಿ ನೀಡಿದ ಒತ್ತಡದಿಂದಾಗಿ ಬ್ಯಾಂಕ್ವೆಟ್ ಹಾಲ್ ಮಾಲೀಕರು ಈ ರೀತಿ ಮಾಡಿದ್ದಾರೆ ಎಂದು ದಿಪ್ಕೆ ಆರೋಪಿಸಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಜೀತ್ ದಿಪ್ಕೆ, ಜಂತರ್ ಮಂತರ್ ಪ್ರತಿಭಟನೆಯ 2ನೇ ಹಂತ ಯಾವಾಗ ಪ್ರಾರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ನಿರಂತರವಾಗಿ ಕೇಳುತ್ತಿದ್ದಾರೆ ಎಂದು ಹೇಳಿದರು. “ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಜನರು ಜಂತರ್-ಮಂತರ್ ಸೀಸನ್ 2 ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದರು. ಜಂತರ್-ಮಂತರ್ ಸೀಸನ್ 2 ಅತ್ಯಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಾನು ಅವರಿಗೆ ತಿಳಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್
ಸಿಜೆಪಿ ಸಭೆಗಾಗಿ ಹಾಲ್ ಬುಕ್ ಮಾಡಲಾಗಿತ್ತು. ಆದರೆ ಸಂಘಟಕರು ಸ್ಥಳಕ್ಕೆ ತಲುಪಿದಾಗ ಪ್ರವೇಶ ನಿರಾಕರಿಸಲಾಯಿತು. ಮೇಲಿಂದ ಒತ್ತಡವಿದೆ ಎಂದು ಹಾಲ್ ಮಾಲೀಕರು ಹೇಳಿರುವುದಾಗಿ ದಿಪ್ಕೆ ಆರೋಪಿಸಿದ್ದಾರೆ. ಪ್ರದೇಶದ ಇತರ ಸಭಾಂಗಣಗಳ ಮಾಲೀಕರೂ ಸಭೆಗೆ ಜಾಗ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಬುಕ್ ಮಾಡಲಾಗಿದ್ದ ಹಾಲ್ ಮಾಲೀಕರಿಗೆ ಇಂದು ಬೆಳಿಗ್ಗೆ ಬೆದರಿಕೆ ಹಾಕಲಾಗಿತ್ತು ಎಂದು ದಿಪ್ಕೆ ಹೇಳಿದ್ದಾರೆ.
ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, “ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಲು ಸಿಜೆಪಿ ದೇಶಾದ್ಯಂತ ‘ಲಿಸನಿಂಗ್ ಟೂರ್’ ಆರಂಭಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನದಿಂದ ಶಿಕ್ಷಣದ ವಿಷಯಕ್ಕೆ ಆದ್ಯತೆ ನೀಡಿ ಅಭಿಯಾನ ನಡೆಸಲಿದ್ದೇವೆ. ಇಂತಹ ಅಸಮರ್ಥ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ಸೀಸನ್ 2 ಆಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ
ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಸುದೀರ್ಘ ಪ್ರತಿಭಟನೆ ನಡೆಸಿತ್ತು. ಈ ಆಂದೋಲನಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಬೆಂಬಲ ನೀಡಿದ್ದರು. ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜೂನ್ 28ರಂದು ಪ್ರತಿಭಟನೆಗೆ ಸೇರಿಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ನಂತರ ಅವರ ಆರೋಗ್ಯ ಕ್ಷೀಣಿಸಿದಾಗ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜುಲೈ 20ರಂದು ಪ್ರತಿಭಟನಾಕಾರರು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸ್ ಕ್ರಮ ಎದುರಿಸಬೇಕಾಯಿತು. ಅಂತಿಮವಾಗಿ ಜುಲೈ 25ರಂದು ಸರ್ಕಾರದೊಂದಿಗೆ ನಡೆದ ಮಾತುಕತೆ ಮತ್ತು ಪ್ರಮುಖ ಬೇಡಿಕೆಗಳಿಗೆ ಭರವಸೆ ಸಿಕ್ಕ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೊಂದು ಪ್ರತಿಭಟನೆಗೆ ಸಿಜೆಪಿ ಮುಂದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




