ಆಂಧ್ರ ಸರ್ಕಾರದ ನೀತಿಗಳ ಪ್ರಚಾರಕ್ಕೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಬಳಕೆ; ಹೊಸ ನೀತಿಗೆ ಸಂಪುಟ ಅನುಮೋದನೆ
ಆಂಧ್ರ ಸರ್ಕಾರ ತನ್ನ ಜನಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸಲು ಹೊಸ ಪ್ಲಾನ್ ಮಾಡಿದೆ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು ಪ್ರಚಾರಕ್ಕಾಗಿ ಬಳಸಲು ಹೊರಟಿದೆ. ಈ ನಿಟ್ಟಿನಲ್ಲಿ ಹೊಸ ನೀತಿಯೊಂದನ್ನು ರೂಪಿಸಿದ್ದು, ಆಂಧ್ರ ಸಂಪುಟ ಅನುಮೋದನೆ ನೀಡಿದೆ. ಈ ನೀತಿ ಪ್ರಕಾರ, ಫಾಲೋಯರ್ಸ್ ಮಾನದಂಡದ ಪ್ರಕಾರ ಗೌರವಧನ ನೀಡಲಾಗುತ್ತದೆ.

ನವದೆಹಲಿ, ಸೆಪ್ಟೆಂಬರ್ 23: ಆಂಧ್ರಪ್ರದೇಶ ಸರ್ಕಾರವು ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು (Social Media Influencers) ಬಳಸಿಕೊಂಡು ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ವಿಶೇಷ ಪ್ಲಾನ್ ಹಾಕಿದೆ. ಈ ನಿಟ್ಟಿನಲ್ಲಿ ನೂತನ ‘ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನೀತಿ’ಗೆ (Social Media Influencers Policy) ಆಂಧ್ರಪ್ರದೇಶ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಈ ನೂತನ ನೀತಿಯಡಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಹೊಂದಿರುವ ಫಾಲೋವರ್ಸ್‌ಗಳು ಮತ್ತು ಅವರ ತಲುಪುವಿಕೆ (Reach/Engagement) ಆಧಾರದ ಮೇಲೆ ಸರ್ಕಾರಿ ಜಾಹೀರಾತುಗಳು ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ನೀಡಿ, ಅದಕ್ಕೆ ತಕ್ಕಂತೆ ಪಾವತಿ (Payments) ಮಾಡಲು ನಿರ್ಧರಿಸಲಾಗಿದೆ.
ಸೋಷಿಯಲ್ ಮೀಡಿಯಾ ಪ್ರಭಾವಿಗಳ ವರ್ಗೀಕರಣ ಹೀಗೆ…
ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಎಕ್ಸ್ (ಟ್ವಿಟರ್) ಹಾಗೂ ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ಇನ್ಫ್ಲುಯೆನ್ಸರ್‌ಗಳನ್ನು ಅವರ ಫಾಲೋವರ್ಸ್ ಮತ್ತು ವೀಕ್ಷಣೆಗಳ (Views) ಸಂಖ್ಯೆಗೆ ಅನುಗುಣವಾಗಿ ವಿವಿಧ ಕೆಟಗರಿಗಳಾಗಿ (A, B, C, D ಇತ್ಯಾದಿ) ವಿಂಗಡಿಸಲಾಗುತ್ತದೆ.
ಇದನ್ನೂ ಓದಿ: ಚುನಾವಣಾ ಆಯೋಗದಲ್ಲಿ ಭಿನ್ನಾಭಿಪ್ರಾಯ ಮೂಡಿದರೆ ಯಾರ ತೀರ್ಮಾನ ಅಂತಿಮ? ಸಿಇಸಿ, ಇಸಿಗಳ ಅಧಿಕಾರ, ನಿಯಮಗಳಿವು
ಯೂಟ್ಯೂಬ್ ಸಬ್‌ಸ್ಕ್ರೈಬರ್‌ಗಳು ಅಥವಾ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹೆಚ್ಚಿದ್ದಷ್ಟು ಸರ್ಕಾರದ ಪ್ರಚಾರ ಸಾಮಗ್ರಿಗಳು ಸಿಗಲಿದ್ದು, ಅದಕ್ಕೆ ಅನುಗುಣವಾಗಿ ಪ್ರೋತ್ಸಾಹಧನ/ಪಾವತಿ ನಿಗದಿಯಾಗಲಿದೆ.
ಫಾಲೋಯರ್ಸ್ ಲೆಕ್ಕದಲ್ಲಿ ಇನ್ಫ್ಲುಯೆನ್ಸರ್ಗಳ ವರ್ಗೀಕರಣ ಮತ್ತು ಪಾವತಿ
- 10,000-24,999 ಫಾಲೋಯರ್ಸ್ ಹೊಂದಿರುವವರಿಗೆ 2,500 ರೂವರೆಗೆ ಪಾವತಿ
- 25,000-49,999 ಫಾಲೋಯರ್ಸ್ ಹೊಂದಿರುವವರಿಗೆ 5,000 ರೂವರೆಗೆ ಪಾವತಿ
- 50,000-99,999 ಫಾಲೋಯರ್ಸ್ ಇರುವವರಿಗೆ 7,500 ರೂವರೆಗೆ ಪಾವತಿ
- 1,00,000 ಮೇಲ್ಪಟ್ಟ ಫಾಲೋಯರ್ಸ್ ಇರುವ ಇನ್ಫ್ಲುಯೆನ್ಸರ್ಗಳಿಗೆ 15,000 ರೂವರೆಗೆ ಪಾವತಿ
ಪ್ರಚಾರದಲ್ಲಿ ಪಾಲ್ಗೊಳ್ಳಬಯಸುವ ಇನ್ಫ್ಲುಯೆನ್ಸರ್‌ಗಳು ನೊಂದಾಯಿಸುವ ಕ್ರಮ
ಸರ್ಕಾರದ ಯೋಜನೆಗಳ ಪ್ರಚಾರದಲ್ಲಿ ಭಾಗವಹಿಸಲು ಇಚ್ಛಿಸುವ ಇನ್ಫ್ಲುಯೆನ್ಸರ್‌ಗಳು ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ (IPR Department) ಪೋರ್ಟಲ್‌ನಲ್ಲಿ ತಮ್ಮ ಖಾತೆ ವಿವರಗಳೊಂದಿಗೆ ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು. ಸರ್ಕಾರವು ಪ್ರತಿಯೊಬ್ಬರ ಖಾತೆಯನ್ನು ಪರಿಶೀಲಿಸುತ್ತದೆ. ಅನುಮೋದನೆ ಪಡೆದ ಕಂಟೆಂಟ್ ಕ್ರಿಯೇಟರ್ಸ್ಗೆ ಸರ್ಕಾರದಿಂದ ವಿಶೇಷ ಐಡಿ ಕಾರ್ಡ್ಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಹುರುನ್ ಇಂಡಿಯಾ ರಿಚ್ ಲಿಸ್ಟ್ 2026: ಮುಕೇಶ್ ಅಂಬಾನಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಗೌತಮ್ ಅದಾನಿ
ದಾರಿ ತಪ್ಪಿದ ಇನ್ಫ್ಲುಯೆನ್ಸರ್ಗಳಿಗೆ ಇರಲ್ಲ ಅವಕಾಶ
ಸುಳ್ಳು ಮಾಹಿತಿ (Fake News), ಪ್ರಚೋದನಾಕಾರಿ ಅಥವಾ ಸಾಮಾಜಿಕ ಶಾಂತಿಗೆ ಭಂಗ ತರುವಂತಹ ವಿಷಯಗಳನ್ನು ಹರಡುವ ಖಾತೆಗಳನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುತ್ತದೆ. ಕೇವಲ ನೈಜ ಹಾಗೂ ಹೆಚ್ಚಿನ ಜನಾಕರ್ಷಣೆ ಹೊಂದಿರುವ ಕ್ರಿಯೇಟರ್ಸ್‌ಗಳಿಗೆ ಆದ್ಯತೆ ನೀಡಲಾಗುತ್ತದೆ.
ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ಗ್ರಾಮೀಣ ಭಾಗದ ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಮತ್ತು ಯುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಆರ್ಥಿಕ ನೆರವು ಹಾಗೂ ಉದ್ಯೋಗಾವಕಾಶ ಒದಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Wed, 23 September 26




