AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ

Story of Pingali Venkayya: 'ತಿರಂಗಾ' ನಮ್ಮ ಸ್ವಾಭಿಮಾನದ ಸಂಕೇತ. ಇದರ ರೂವಾರಿ ಪಿಂಗಳಿ ವೆಂಕಯ್ಯ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆಯೇ ಭಾರತದ ಧ್ವಜವನ್ನು ಸಿದ್ಧಪಡಿಸಿದವರು. ತ್ರಿವರ್ಣ ಧ್ವಜದ ವಿನ್ಯಾಸದ ಹಿಂದಿನ ಕಥೆಯೇ ಒಂದು ರೋಚಕ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ
ಪಿಂಗಳಿ ವೆಂಕಯ್ಯImage Credit source: google
ಗಂಗಾಧರ​ ಬ. ಸಾಬೋಜಿ
|

Updated on:Aug 12, 2026 | 8:43 PM

Share

ಬೆಂಗಳೂರು, ಆಗಸ್ಟ್​​ 12: ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿದೆ. ಸ್ವತಂತ್ರ ಭಾರತದ ಆಗಸದಲ್ಲಿ ಹೆಮ್ಮೆಯಿಂದ ಹಾರಾಡುವ ನಮ್ಮ ರಾಷ್ಟ್ರಧ್ವಜ ‘ತಿರಂಗಾ’ ಕೋಟ್ಯಂತರ ಭಾರತೀಯರ ಸ್ವಾಭಿಮಾನ, ಒಗ್ಗಟ್ಟು ಮತ್ತು ಶೌರ್ಯದ ಪ್ರತೀಕ. ಈ ಶುಭ ಸಂದರ್ಭದಲ್ಲಿ ಧ್ವಜವನ್ನು ವಿನ್ಯಾಸಗೊಳಿಸಿದ ಮಹಾನ್ ದೇಶಭಕ್ತ ಪಿಂಗಳಿ ವೆಂಕಯ್ಯ ಅವರ ಜೀವನ ಪಯಣ ಹಾಗೂ ನಮ್ಮ ರಾಷ್ಟ್ರಧ್ವಜದ (National Flag) ಮಹತ್ವವನ್ನು ತಿಳಿಯುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.

ಜನನ ಮತ್ತು ಹಿನ್ನೆಲೆ

ಪಿಂಗಳಿ ವೆಂಕಯ್ಯ 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಭಟ್ಲಪೆನುಮರ್ರು ಗ್ರಾಮದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ತೀವ್ರ ದೇಶಭಕ್ತರಾಗಿದ್ದು, ತಮ್ಮ 19ನೇ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೈನ್ಯಕ್ಕೆ ಸೇರಿ ಆಫ್ರಿಕಾದಲ್ಲಿ ನಡೆದ ಬೋಯರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ  ಮಹಾತ್ಮ ಗಾಂಧಿಯನ್ನ ಭೇಟಿಯಾದರು. ಬಳಿಕ ವೆಂಕಯ್ಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಇದನ್ನೂ ಓದಿ: Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಬೋಯರ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಯೂನಿಯನ್ ಜ್ಯಾಕ್ ಧ್ವಜಕ್ಕೆ ಭಾರತೀಯ ಸೈನಿಕರು ಗೌರವ ಸಲ್ಲಿಸುವುದನ್ನು ಕಂಡಿದ್ದ ವೆಂಕಯ್ಯರಿಗೆ, ಭಾರತಕ್ಕೂ ಒಂದು ಪ್ರತ್ಯೇಕ ರಾಷ್ಟ್ರಧ್ವಜವಿರಬೇಕೆಂಬ ಆಲೋಚನೆ ಮೂಡಿತ್ತು. ದಿನಗಳು ಕಳೆದಂತೆ ರಾಷ್ಟ್ರಧ್ವಜ ವಿನ್ಯಾಸಗೊಳಿಸುವುದು ಕೇವಲ ಒಂದು ಆಸಕ್ತಿಯ ವಿಷಯವಾಗಿ ಉಳಿಯದೆ, ಅದೊಂದು ಮಹತ್ತರವಾದ ಧ್ಯೇಯವಾಗಿ ಪರಿವರ್ತನೆಗೊಂಡಿತು.

30ಕ್ಕೂ ಹೆಚ್ಚು ದೇಶಗಳ ರಾಷ್ಟ್ರಧ್ವಜಗಳ ಅಧ್ಯಯನ

ಪಿಂಗಳಿ ವೆಂಕಯ್ಯ ಕೇವಲ ಒಂದೇ ಒಂದು ಧ್ವಜದ ವಿನ್ಯಾಸವನ್ನು ಸಿದ್ಧಪಡಿಸಿ ಸುಮ್ಮನಾಗಲಿಲ್ಲ. ಬದಲಿಗೆ 1916ರಿಂದ 1921ರವರೆಗೆ ವಿವಿಧ ದೇಶಗಳ ಧ್ವಜಗಳಲ್ಲಿ ಬಳಸಲಾದ ಬಣ್ಣ ಹಾಗೂ ಸಂಕೇತ ಹೇಗೆ ಆಯಾ ರಾಷ್ಟ್ರಗಳ ಅನನ್ಯ ಗುರುತನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಆಳವಾಗಿ ತಿಳಿಯಲು ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದರು. ಈ ಸುದೀರ್ಘ ಸಂಶೋಧನೆಯ ಫಲವಾಗಿ ಅವರು ಭಾರತಕ್ಕೊಂದು ಪ್ರತ್ಯೇಕ ರಾಷ್ಟ್ರಧ್ವಜದ ಕುರಿತು ವೈವಿಧ್ಯಮಯ ಪರಿಕಲ್ಪನೆಗಳನ್ನೊಳಗೊಂಡ ‘ಎ ನ್ಯಾಷನಲ್ ಫ್ಲ್ಯಾಗ್ ಫಾರ್ ಇಂಡಿಯಾ’ ಎಂಬ ವಿಶೇಷ ಕಿರುಹೊತ್ತಗೆಯನ್ನು ಹೊರತಂದರು. ತಮ್ಮ ಈ ಪ್ರಸ್ತಾವನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿಯೊಂದು ಅಧಿವೇಶನಕ್ಕೂ ಸತತವಾಗಿ ತೆಗೆದುಕೊಂಡು ಹೋಗುವ ಮೂಲಕ, ರಾಷ್ಟ್ರಧ್ವಜದ ಅಗತ್ಯತೆಯನ್ನು ಎತ್ತಿ ತೋರಿಸಿದರು.

ಅಂತಿಮ ಮಾನ್ಯತೆ

1921ರಲ್ಲಿ ವಿಜಯವಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ವೆಂಕಯ್ಯ ಅವರು ತಾವು ವಿನ್ಯಾಸಗೊಳಿಸಿದ ಧ್ವಜವನ್ನು ಮಹಾತ್ಮ ಗಾಂಧೀಜಿಯವರಿಗೆ ನೀಡಿದರು. ಗಾಂಧೀಜಿಯವರ ಸಲಹೆಯಂತೆ ಧ್ವಜದ ಮಧ್ಯದಲ್ಲಿ ಸ್ವಾವಲಂಬನೆಯ ಸಂಕೇತವಾಗಿ ‘ಚರಕ’ವನ್ನು ಸೇರಿಸಲಾಯಿತು. ಈ ವಿನ್ಯಾಸವೇ ಮುಂದೆ 1947ರ ಜುಲೈ 22ರಂದು ಸಂವಿಧಾನ ಸಭೆಯಿಂದ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಅಂದರೆ ಚರಕದ ಬದಲು ಅಶೋಕ ಚಕ್ರವನ್ನು ಸೇರಿಸುವ ಮೂಲಕ ಭಾರತದ ಅಧಿಕೃತ ರಾಷ್ಟ್ರಧ್ವಜವಾಗಿ ಅಂಗೀಕರಿಸಲ್ಪಟ್ಟಿತು.

ತ್ರಿವರ್ಣ ಧ್ವಜದ ವಿಶೇಷತೆ ಮತ್ತು ಸಂಕೇತ

ನಮ್ಮ ರಾಷ್ಟ್ರಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಹಾಗೂ ಕೆಳಭಾಗದಲ್ಲಿ ಹಸಿರು ಬಣ್ಣದ ಸಮಾನ ಅನುಪಾತದ ಪಟ್ಟಿಗಳನ್ನು ಹೊಂದಿದೆ.

  • ಕೇಸರಿ: ಧೈರ್ಯ, ತ್ಯಾಗ ಮತ್ತು ಸಮರ್ಪಣಾ ಮನೋಭಾವದ ಸಂಕೇತ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಲು ಇದು ಪ್ರೇರೇಪಿಸುತ್ತದೆ.
  • ಬಿಳಿ: ಶಾಂತಿ, ಸತ್ಯ ಮತ್ತು ಪರಿಶುದ್ಧತೆಯ ಸಂಕೇತ. ನಮ್ಮ ಚಿಂತನೆ ಮತ್ತು ನಡವಳಿಕೆ ಸತ್ಯದ ಹಾದಿಯಲ್ಲಿರಬೇಕು ಎಂಬುದನ್ನು ನೆನಪಿಸುತ್ತದೆ.
  • ಹಸಿರು: ನಂಬಿಕೆ, ಫಲವತ್ತತೆ ಮತ್ತು ದೇಶದ ಸಮೃದ್ಧಿಯ ಸಂಕೇತ. ಇದು ಭಾರತದ ಪ್ರಾಕೃತಿಕ ಸೌಂದರ್ಯ ಹಾಗೂ ಕೃಷಿ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
  • ಅಶೋಕ ಚಕ್ರ: ಬಿಳಿ ಪಟ್ಟಿಯ ಮಧ್ಯದಲ್ಲಿರುವ ನೀಲಿ ಬಣ್ಣದ ಅಶೋಕ ಚಕ್ರವು ಚಲನೆ ಮತ್ತು ನೈತಿಕತೆಯ ಸಂಕೇತವಾಗಿದೆ. ಅಶೋಕ ಚಕ್ರದಲ್ಲಿರುವ 24 ರೇಖೆಗಳು ದಿನದ 24 ಗಂಟೆಗಳನ್ನು ಪ್ರತಿನಿಧಿಸುತ್ತದೆ. ದೇಶವು ನಿರಂತರವಾಗಿ ಪ್ರಗತಿಯತ್ತ ಚಲಿಸುತ್ತಿರಬೇಕು ಎಂಬುದನ್ನು ಇದು ಸೂಚಿಸುತ್ತದೆ.
  • ನೀಲಿ ಬಣ್ಣ: ಆಕಾಶ ಮತ್ತು ಸಾಗರದಂತೆ ವಿಶಾಲವಾದ ಮನೋಭಾವವನ್ನು ಪ್ರತಿನಿಧಿಸುತ್ತದೆ.

ಧ್ವಜದ ಪ್ರಮುಖ ನಿಯಮಗಳು 

  • ರಾಷ್ಟ್ರಧ್ವಜವು ಯಾವಾಗಲೂ ಆಯತಾಕಾರದಲ್ಲೇ ಇರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತ 3:2 ಇರತಕ್ಕದ್ದು.
  • ಧ್ವಜವನ್ನು ಹಾರಿಸುವಾಗ ಕೇಸರಿ ಬಣ್ಣದ ಪಟ್ಟಿಯು ಯಾವಾಗಲೂ ಮೇಲ್ಭಾಗದಲ್ಲೇ ಇರಬೇಕು.
  • ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸುವುದು ಕಾನೂನುಬಾಹಿರ.

ಇದನ್ನೂ ಓದಿ: Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು

ಪ್ರತಿಯೊಬ್ಬ ಭಾರತೀಯನಿಗೂ ದೇಶಪ್ರೇಮದ ಸ್ಪೂರ್ತಿ ನೀಡುವ ನಮ್ಮ ತ್ರಿವರ್ಣ ಧ್ವಜ ಮತ್ತು ಅದನ್ನು ನೀಡಿದ ಪಿಂಗಳಿ ವೆಂಕಯ್ಯನವರ ತ್ಯಾಗ ಚಿರಸ್ಮರಣೀಯ.

ಮತ್ತಷ್ಟು ಜೀವನಶೈಲಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Wed, 12 August 26

Follow Us