ಹೊಸ ಇನಿಂಗ್ಸ್ ಆರಂಭಿಸಿದ ಆಂಡ್ರ್ಯೂ ಫ್ಲಿಂಟಾಫ್!

Andrew Flintoff: ಇಂಗ್ಲೆಂಡ್​ನ ಖ್ಯಾತ ಆಲ್​ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ 2014-15ರ ಬಿಗ್ ಬ್ಯಾಷ್ ಲೀಗ್​ ಸೀಸನ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಟಗಾರನಾಗಿ ಕಣಕ್ಕಿಳಿದಿದ್ದರು. ಇದೀಗ ಅವರು ಸಿಡ್ನಿ ಥಂಡರ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ.

ಹೊಸ ಇನಿಂಗ್ಸ್ ಆರಂಭಿಸಿದ ಆಂಡ್ರ್ಯೂ ಫ್ಲಿಂಟಾಫ್!
Andrew Flintoff
Image Credit source: BBL/Google

Updated on: Jun 08, 2026 | 12:19 PM

ಇಂಗ್ಲೆಂಡ್ ತಂಡದ ಮಾಜಿ ಆಲ್​ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಬಿಗ್ ಬ್ಯಾಷ್ ಲೀಗ್‌ನ (BBL) ಸಿಡ್ನಿ ಥಂಡರ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸಿಡ್ನಿ ಥಂಡರ್ ಫ್ರಾಂಚೈಸಿ ಫ್ಲಿಂಟಾಫ್​ರೊಂದಿಗೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಸಿಡ್ನಿ ಥಂಡರ್ ತಂಡದ ಕೋಚ್ ಆಗಿ ಟ್ರೆವರ್ ಬೇಲಿಸ್ ಕಾಣಿಸಿಕೊಂಡಿದ್ದರು. ಇದೀಗ ಆ ಸ್ಥಾನಕ್ಕೆ ಫ್ಲಿಂಟಾಫ್ ಆಯ್ಕೆಯಾಗಿದ್ದಾರೆ.

ಈ ಹೈ-ಪ್ರೊಫೈಲ್ ಹುದ್ದೆಗಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಶೇನ್ ವಾಟ್ಸನ್ ಮತ್ತು ಡಾನ್ ಕ್ರಿಶ್ಚಿಯನ್ ಅವರಂತಹ ಪ್ರಮುಖ ಹೆಸರುಗಳು ರೇಸ್‌ನಲ್ಲಿದ್ದವು. ಆದರೆ, ಫ್ರಾಂಚೈಸಿಯು ಫ್ಲಿಂಟಾಫ್ ಅವರ ಆಕ್ರಮಣಕಾರಿ ಶೈಲಿ ಮತ್ತು ನಾಯಕತ್ವದ ಗುಣಗಳಿಗೆ ಮಣೆ ಹಾಕಿದೆ.

ಫ್ಲಿಂಟಾಫ್ ಅನುಭವ:

ಆಂಡ್ರ್ಯೂ ಫ್ಲಿಂಟಾಫ್ ಈಗಾಗಲೇ ತಮ್ಮ ಕೋಚಿಂಗ್ ಕೆರಿಯರ್ ಆರಂಭಿಸಿದ್ದಾರೆ.  ಅಂದರೆ ದಿ ಹಂಡ್ರೆಡ್ ಲೀಗ್, ಇಂಗ್ಲೆಂಡ್ ಕಿರಿಯರ ತಂಡಗಳ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದಾಗ್ಯೂ ಯುನೈಟೆಡ್ ಕಿಂಗ್‌ಡಮ್ (UK) ಹೊರಗೆ ಫ್ಲಿಂಟಾಫ್ ಅವರಿಗೆ ಸಿಗುತ್ತಿರುವ ಮೊದಲ ಪ್ರಮುಖ ಫ್ರಾಂಚೈಸಿ ಕೋಚಿಂಗ್ ಜವಾಬ್ದಾರಿ ಇದಾಗಿದೆ.

  • ದಿ ಹಂಡ್ರೆಡ್: ‘ನಾರ್ದರ್ನ್ ಸೂಪರ್‌ಚಾರ್ಜರ್ಸ್’ ತಂಡದ ಮುಖ್ಯ ಕೋಚ್ ಆಗಿ ಎರಡು ಸೀಸನ್‌ಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
  • ಇಂಗ್ಲೆಂಡ್ ಲಯನ್ಸ್ : ಅಕ್ಟೋಬರ್ 2024 ರಿಂದ ಇಂಗ್ಲೆಂಡ್‌ನ ಕಿರಿಯರ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
  •  ಇಂಗ್ಲೆಂಡ್ ಸೀನಿಯರ್ ತಂಡ: ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡಕ್ಕೆ ಕೆಲಕಾಲ ಸಲಹೆಗಾರರಾಗಿ  ಸೇವೆ ಸಲ್ಲಿಸಿದ್ದಾರೆ.

ಫ್ಲಿಂಟಾಫ್ ಮುಂದಿರುವ ಸವಾಲುಗಳು:

ಕಳೆದ ಬಿಬಿಎಲ್ ಸೀಸನ್‌ನಲ್ಲಿ ಸಿಡ್ನಿ ಥಂಡರ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ತಂಡವನ್ನು ಮತ್ತೆ ಬಲಿಷ್ಠಗೊಳಿಸುವುದು ಫ್ಲಿಂಟಾಫ್ ಮುಂದಿರುವ ಮೊದಲ ಸವಲಾಗಿದೆ.

ಸದ್ಯ ಥಂಡರ್ ತಂಡದಲ್ಲಿ ಡೇವಿಡ್ ವಾರ್ನರ್, ಸ್ಯಾಮ್ ಬಿಲ್ಲಿಂಗ್ಸ್, ತನ್ವೀರ್ ಸಂಘಾ ಮತ್ತು ಉದಯೋನ್ಮುಖ ತಾರೆ ಸ್ಯಾಮ್ ಕೊನ್​ಸ್ಟಾಸ್​ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ.

ಇದನ್ನೂ ಓದಿ: ಒಂದೇ ತಂಡವಾದ ಎರಡು ಟೀಮ್​​ಗಳು..!

ಆದಾಗ್ಯೂ ಕಳೆದ ಬಾರಿ ಸಂಪೂರ್ಣ ಕುಸಿತ ಕಂಡಂತಹ ಸಿಡ್ನಿ ಥಂಡರ್ ತಂಡಕ್ಕೆ ಮೇಜರ್ ಸರ್ಜರಿ ಮಾಡಬೇಕಾದ ಅನಿವಾರ್ಯತೆ ಆಂಡ್ರ್ಯೂ ಫ್ಲಿಂಟಾಫ್ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಫ್ಲಿಂಟಾಫ್ ಕೋಚಿಂಗ್ ಕೆರಿಯರ್​ನಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

 

 

Follow Us