4 ಎಸೆತಗಳಲ್ಲಿ 4 ವಿಕೆಟ್, 9 ಎಸೆತಗಳಲ್ಲಿ 5 ವಿಕೆಟ್: ಇತಿಹಾಸ ಬರೆದ ಭಾರತದ ವೇಗಿ
2026ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಜಮ್ಷೆಡ್ ಆಲಂ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೌರಾಷ್ಟ್ರ ವಿರುದ್ಧ ರೈಲ್ವೇಸ್ ಗೆಲುವಿನಲ್ಲಿ ಇವರ ಬೌಲಿಂಗ್ ಪ್ರಮುಖ ಪಾತ್ರ ವಹಿಸಿತು. ಜಮ್ಷೆಡ್ ಕೇವಲ 9 ಎಸೆತಗಳಲ್ಲಿ 5 ವಿಕೆಟ್ ಪಡೆದು ಭಾರತದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಅಷ್ಟೇ ಅಲ್ಲ, ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

2026ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ರೈಲ್ವೇಸ್ ತಂಡ ಸೌರಾಷ್ಟ್ರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ರೈಲ್ವೇಸ್ ತಂಡ ಗೆಲುವು ಸಾಧಿಸುವಲ್ಲಿ ವೇಗದ ಬೌಲರ್ ಜಮ್ಶೆಡ್ ಆಲಂ ಪ್ರಮುಖ ಪಾತ್ರ ವಹಿಸಿದ್ದಾರೆ. 23 ವರ್ಷದ ಜಮ್ಶೆಡ್ ಆಲಂ ತಮ್ಮ ಟಿ20 ವೃತ್ತಿಜೀವನದ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂದೋರ್‌ನ ಡಾಲಿ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಮ್ಶೆಡ್ ಆಲಂ ಎರಡು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಅವರು, ಬಳಿಕ ಕೇವಲ 9 ಎಸೆತಗಳ ಅಂತರದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಪಡೆದ ಭಾರತದ ಆರನೇ ಬೌಲರ್ ಎಂಬ ಹೆಗ್ಗಳಿಕೆಗೆ ಜಮ್ಶೆಡ್ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಕೇವಲ 9 ಎಸೆತಗಳಲ್ಲಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವಕ್ಕೆ ಮೂರನೇ ಬೌಲರ್
ಕ್ರಿಕ್‌ಇನ್ಫೊ ಡೇಟಾಬೇಸ್ ಪ್ರಕಾರ, ಪುರುಷರ ಟಿ20 ಕ್ರಿಕೆಟ್‌ನಲ್ಲಿ 9 ಎಸೆತಗಳ ಒಳಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿರುವುದು ಈ ಹಿಂದೆ ಕೇವಲ ಇಬ್ಬರು ಬೌಲರ್‌ಗಳು ಮಾತ್ರ. ಇಂಡೋನೇಷ್ಯಾದ ಗೆಡೆ ಪ್ರಿಯಾಂಡಾನಾ 2025ರಲ್ಲಿ ಕಾಂಬೋಡಿಯಾ ವಿರುದ್ಧ ಕೇವಲ 6 ಎಸೆತಗಳಲ್ಲಿ ಐದು ವಿಕೆಟ್ ಪಡೆದಿದ್ದರು. ಅದೇ ವರ್ಷ ಫಿನ್‌ಲ್ಯಾಂಡ್‌ನ ಮಹೇಶ್ ತಾಂಬೆ ಎಸ್ಟೋನಿಯಾ ವಿರುದ್ಧ 8 ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ್ದರು.
ಇದೀಗ ಈ ವಿಶೇಷ ದಾಖಲೆ ಪಟ್ಟಿಗೆ ಜಮ್ಶೆಡ್ ಆಲಂ ಕೂಡ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 10 ಎಸೆತಗಳ ಒಳಗೆ ಐದು ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
4 ಎಸೆತಗಳಲ್ಲಿ 4 ವಿಕೆಟ್
ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಜಮ್ಶೆಡ್ ಆಲಂ ಮತ್ತೊಂದು ಅಪರೂಪದ ಸಾಧನೆಯನ್ನೂ ಮಾಡಿದ್ದಾರೆ. ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಕರ್ನಾಟಕದ ಅಭಿಮನ್ಯು ಮಿಥುನ್ ಹರಿಯಾಣ ವಿರುದ್ಧ ಈ ಸಾಧನೆ ಮಾಡಿದ್ದರು. 2021ರಲ್ಲಿ ಕರ್ನಾಟಕ ವಿರುದ್ಧ ನಡೆದ ಪಂದ್ಯದಲ್ಲಿ ವಿದರ್ಭದ ದರ್ಶನ್ ನಲ್ಕಂಡೆ ಕೂಡ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು.
ಸತತ 4 ಎಸೆತಗಳಲ್ಲಿ ಔಟ್
ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲೇ ಅಬ್ಬರಿಸಿದ 23 ವರ್ಷದ ಜಮ್ಶೆಡ್ ಆಲಂ, ಸೌರಾಷ್ಟ್ರ ತಂಡದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದರು. ಹಾರ್ವಿಕ್ ದೇಸಾಯಿ, ಪ್ರೇರಕ್ ಮಂಕಡ್, ರುಚಿತ್ ಅಹಿರ್ ಹಾಗೂ ಸಮರ್ ಗಜ್ಜರ್ ಅವರು ಜಮ್ಶೆಡ್ ಆಲಂ ಅವರ ಮಾರಕ ಬೌಲಿಂಗ್‌ಗೆ ಬಲಿಯಾದರು. ನಾಲ್ಕನೇ ಓವರ್‌ನ ಮೂರನೇ, ನಾಲ್ಕನೇ, ಐದನೇ ಹಾಗೂ ಆರನೇ ಎಸೆತಗಳಲ್ಲಿ ಈ ನಾಲ್ವರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು.
ಇದಾದ ಬಳಿಕ ಮುಂದಿನ ಓವರ್‌ನಲ್ಲಿ ಸಿದ್ಧಾರ್ಥ್ ರಾಣಾ ಅವರ ವಿಕೆಟ್ ಪಡೆಯುವ ಮೂಲಕ ಐದು ವಿಕೆಟ್‌ಗಳ ಸಾಧನೆ ಪೂರ್ಣಗೊಳಿಸಿದರು. 183 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ಸೌರಾಷ್ಟ್ರ ತಂಡ ಈ ಹಂತದಲ್ಲಿ 30 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಟಿ20 ಕ್ರಿಕೆಟ್‌ನಲ್ಲಿ ಚಹಲ್ ವಿಶ್ವದಾಖಲೆ; 400 ವಿಕೆಟ್ ಪಡೆದ ಮೊದಲ ಭಾರತೀಯ
ಬೌಲಿಂಗ್ ಅಬ್ಬರಕ್ಕೆ ಸೌರಾಷ್ಟ್ರ ತತ್ತರ
ಜಮ್ಶೆಡ್ ಆಲಂ ಕೇವಲ 1.3 ಓವರ್‌ಗಳಲ್ಲಿ 8 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಬಳಿಕ ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಿದರೂ ಮತ್ತೊಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಆರಂಭದಲ್ಲೇ ಅವರು ನೀಡಿದ ಆಘಾತದಿಂದ ಸೌರಾಷ್ಟ್ರ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 183 ರನ್‌ಗಳ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡ 29 ರನ್‌ಗಳಿಂದ ಸೋಲನುಭವಿಸಿತು. ಜಮ್ಶೆಡ್ ಆಲಂ ಅವರ ಚೊಚ್ಚಲ ಪಂದ್ಯವೇ ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.




