
ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ‘ಬಿಗ್ ಬ್ಯಾಷ್ ಲೀಗ್‘ನ (BBL) ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ ಜೊತೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತುಕತೆ ನಡೆಸಿದ್ದು, ಈ ವೇಳೆ ಬಿಸಿಸಿಐ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ವರದಿಯಾಗಿದೆ.
2026-27ರ ಬಿಬಿಎಲ್ (BBL 16) ಸೀಸನ್‌ನ ಭರ್ಜರಿ ಉದ್ಘಾಟನಾ ಪಂದ್ಯವು ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕಾಗಿ ತಮಿಳುನಾಡಿನ ಚೆನ್ನೈನಲ್ಲಿರುವ ಐತಿಹಾಸಿಕ ಎಂ.ಎ. ಚಿದಂಬರಂ (ಚೇಪಾಕ್) ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ ನೆಲವನ್ನು ಬಿಟ್ಟು ಹೊರದೇಶವೊಂದರಲ್ಲಿ ಬಿಗ್ ಬ್ಯಾಷ್ ಲೀಗ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಪ್ರಯತ್ನಕ್ಕೆ ಕೈ ಹಾಕಲು ನಿರ್ಧರಿಸಿದೆ.
ಚೆನ್ನೈನಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲು ಬಿಬಿಎಲ್‌ನ ಮೂರು ಪ್ರಮುಖ ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ.
ಈ ಮೂರರಲ್ಲಿ ಎರಡು ತಂಡಗಳು ಭಾರತದ ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಸೆಣಸಾಡಲಿವೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಕೋಟಿ ಕೋಟಿ ಭಾರತೀಯ ಪ್ರೇಕ್ಷಕರು ಮತ್ತು ಹೂಡಿಕೆದಾರರು.
ಬಿಬಿಎಲ್ ತಂಡಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸುತ್ತಿರುವ ಸಿಎ (CA), ಭಾರತದ ಐಪಿಎಲ್ (IPL) ಮಾಲೀಕರನ್ನು ಮತ್ತು ದೊಡ್ಡ ಬ್ರಾಂಡ್‌ಗಳನ್ನು ತನ್ನತ್ತ ಸೆಳೆಯಲು ಈ ಬಿಗ್ ಪ್ಲಾನ್ ರೂಪಿಸಿದೆ.
ವಿಶೇಷವೆಂದರೆ, ಭಾರತದಲ್ಲಿ ಈ ಪಂದ್ಯವನ್ನು ಆಯೋಜಿಸಲು ತಗಲುವ ಬಹುಪಾಲು ವೆಚ್ಚವನ್ನು ಕ್ರಿಕೆಟ್ ಆಸ್ಟ್ರೇಲಿಯಾವೇ ಭರಿಸಲಿದೆ.
ಇದನ್ನೂ ಓದಿ: 1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್ಗೇರಬಹುದು?
ಡಿಸೆಂಬರ್ ಮಧ್ಯಭಾಗದಲ್ಲಿ (ಸಂಭಾವ್ಯವಾಗಿ ಡಿಸೆಂಬರ್ 12 ರಂದು) ಈ ಪಂದ್ಯ ನಡೆಯುವ ಸಾಧ್ಯತೆ ಇದೆ. ಅದರಂತೆ, ಭಾರತೀಯ ಕ್ರೀಡಾ ಪ್ರೇಮಿಗಳಿಗೆ ವರ್ಷಾಂತ್ಯದಲ್ಲಿ ಬಿಗ್ ಬ್ಯಾಷ್ ಲೀಗ್ ಅನ್ನು ಚೆನ್ನೈ ನಲ್ಲಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಸದ್ಯಕ್ಕೆ ಬಿಸಿಸಿಐ ಪಂದ್ಯ ಆಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಇನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆಗಳನ್ನು ಪಡೆಯಬೇಕಿದೆ. ಇದಾದ ಬಳಿಕ ಪಂದ್ಯ ಆಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.