ಟೀಮ್ ಇಂಡಿಯಾಗೆ 5 ಕೋಟಿ ರೂ. ನೀಡಿದ ಬಿಸಿಸಿಐ
U19 Women's T20 World Cup 2025: ಭಾರತ ತಂಡವು ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆಲ್ಲುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ 2023 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಶಫಾಲಿ ವರ್ಮಾ ನೇತೃತ್ವದ ಅಂಡರ್-19 ಮಹಿಳಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಟೀಮ್ ಇಂಡಿಯಾ ಮತ್ತೆ ಚಾಂಪಿಯನ್ ಪಟ್ಟಕ್ಕೇರಿದೆ.

ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಕೌಲಾಲಂಪುರದ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ತಂಡವನ್ನು ಮಣಿಸಿ 2ನೇ ಬಾರಿ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಈ ಶ್ರೇಷ್ಠ ಸಾಧನೆಗಾಗಿ ಬಿಸಿಸಿಐ 5 ಕೋಟಿ ರೂ. ಬಹುಮಾನವನ್ನು ಘೋಷಿಸಿದ್ದು, ಈ ನಗದು ಬಹುಮಾನವನ್ನು ಆಟಗಾರರು ಹಾಗೂ ಸಿಬ್ಬಂದಿಗಳು ಹಂಚಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಅಂಡರ್-19 ಮಹಿಳಾ ತಂಡವು 20 ಓವರ್ಗಳಲ್ಲಿ 82 ರನ್ಗಳಿಸಿ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ಪರ ಪರುಣಿಕಾ ಸಿಸೋಡಿಯಾ, ಆಯುಷಿ ಶುಕ್ಲಾ, ವೈಷ್ಣವಿ ಶರ್ಮಾ ತಲಾ 2 ವಿಕೆಟ್ ಕಬಳಿಸಿದರೆ, ಗೊಂಗಡಿ ತ್ರಿಷಾ 3 ವಿಕೆಟ್ ಪಡೆದು ಮಿಂಚಿದರು.
ಇನ್ನು 83 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಗೊಂಗಡಿ ತ್ರಿಷಾ 33 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದರೆ, ಸಾನಿಕಾ ಚಲ್ಕೆ ಅಜೇಯ 26 ರನ್ ಚಚ್ಚಿದರು. ಈ ಮೂಲಕ ಭಾರತ ತಂಡವು 11.2 ಓವರ್ಗಳಲ್ಲಿ 84 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಸೌತ್ ಆಫ್ರಿಕಾ ಮಹಿಳಾ U19 (ಪ್ಲೇಯಿಂಗ್ XI): ಜೆಮ್ಮಾ ಬೋಥಾ, ಸಿಮೋನ್ ಲೌರೆನ್ಸ್, ಡಿಯಾರಾ ರಾಮ್ಲಕನ್, ಫೇ ಕೌಲಿಂಗ್, ಕೈಲಾ ರೆನೆಕೆ (ನಾಯಕಿ), ಕರಾಬೊ ಮೆಸೊ (ವಿಕೆಟ್ ಕೀಪರ್), ಮೈಕೆ ವ್ಯಾನ್ ವೂರ್ಸ್ಟ್, ಸೆಶ್ನಿ ನಾಯ್ಡು, ಆಶ್ಲೀಗ್ ವ್ಯಾನ್ ವೈಕ್, ಮೊನಾಲಿಸಾ ಲೆಗೋಡಿ, ನ್ತಾಬಿಸೆಂಗ್ ನಿನಿ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್
ಭಾರತ ಮಹಿಳಾ U19 (ಪ್ಲೇಯಿಂಗ್ XI): ಜಿ ಕಮಲಿನಿ (ವಿಕೆಟ್ ಕೀಪರ್), ಗೊಂಗಡಿ ತ್ರಿಶಾ, ಸನಿಕಾ ಚಲ್ಕೆ, ನಿಕಿ ಪ್ರಸಾದ್ (ನಾಯಕಿ), ಈಶ್ವರಿ ಅವ್ಸಾರೆ, ಮಿಥಿಲಾ ವಿನೋದ್, ಆಯುಷಿ ಶುಕ್ಲಾ, ಜೋಶಿತಾ ವಿಜೆ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ.