
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಿಂದಾಗಿ ಆರ್‌ಸಿಬಿ (RCB) ತಂಡದ ವಿಜಯೋತ್ಸವಕ್ಕೆ ಸೂತಕದ ಛಾಯೆ ಎದುರಾಗಿದೆ. ಒಂದೆಡೆ ವಿರಾಟ್ ಕೊಹ್ಲಿ (Virat Kohli), ರಜತ್ ಪಾಟಿದಾರ್ ಸೇರಿದಂತೆ ಇಡೀ ಆರ್‌ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಐಪಿಎಲ್ (IPL 2025) ಟ್ರೋಫಿಯನ್ನು ಎತ್ತಿ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ, ಕ್ರೀಡಾಂಗಣದ ಹೊರಗೆ 11 ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಕೆಲವರು ತಮ್ಮ ತಂದೆಯನ್ನು ಕಳೆದುಕೊಂಡರೆ, ಇನ್ನು ಕೆಲವರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅಚ್ಚರಿಯ ವಿಷಯವೆಂದರೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರನ್ನು ಈ ಬಗ್ಗೆ ಕೇಳಿದಾಗ ಅವರು – ಯಾವ ಆಚರಣೆ? ಎಂದು ಕೇಳಿದವರನ್ನೇ ಪ್ರಶ್ನೆ ಮಾಡಿದ್ದಾರೆ. ಮತ್ತೊಂದೆಡೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಕಾರ್ಯಕ್ರಮದ ಆಯೋಜಕರ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದಾರೆ.
ಆರ್‌ಸಿಬಿಯ ಸಂಭ್ರಮಾಚರಣೆಯ ಸಮಯದಲ್ಲಿ ನಡೆದ ಘಟನೆಗೆ ಬಿಸಿಸಿಐ ವಿಷಾದ ವ್ಯಕ್ತಪಡಿಸಿದೆ. ಆಯೋಜಕರು ಕಾರ್ಯಕ್ರಮವನ್ನು ಉತ್ತಮ ಸಿದ್ಧತೆಯೊಂದಿಗೆ ಮಾಡಬೇಕಾಗಿತ್ತು. ಇದು ತುಂಬಾ ದುರದೃಷ್ಟಕರ, ಆರ್‌ಸಿಬಿಯ ಗೆಲುವಿನ ನಂತರ ಸಂಘಟಕರು ಕಾರ್ಯಕ್ರಮವನ್ನು ಸರಿಯಾಗಿ ಯೋಜಿಸಬೇಕಾಗಿತ್ತು. ಅಂತಹ ವಿಜಯೋತ್ಸವ ನಡೆದಾಗ, ಸರಿಯಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ‘ಈ ವಿಜಯೋತ್ಸವದ ಮೆರವಣಿಗೆಯ ಬಗ್ಗೆ ತಿಳಿದಿರಲಿಲ್ಲ. ಈ ಅಪಘಡ ದುಃಖಕರವಾಗಿದೆ. ಆದರೆ ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆರ್‌ಸಿಬಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇನೆ ಎಂದರು.
ಆದಾಗ್ಯೂ ಈ ಅಪಘಡದ ನಂತರ, ಆರ್‌ಸಿಬಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ದುರಂತದ ನಡುವೆಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಆರ್‌ಸಿಬಿ ಆಡಳಿತ ಮಂಡಳಿಗಾಗಲಿ ಅಥವಾ ಆಟಗಾರರಿಗಾಗಲಿ ಈ ಬಗ್ಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ ಎಂಬುದು ಸಧ್ಯದ ಮಾಹಿತಿ.
ಆರ್‌ಸಿಬಿ ಸಂಭ್ರಮಾಚರಣೆ ದುರಂತ; ನಮ್ಮ ಪಾತ್ರವಿಲ್ಲ ಎಂದ ಐಪಿಎಲ್, ಬಿಸಿಸಿಐ
ಆರ್‌ಸಿಬಿ ಗೆಲುವಿನ ನಂತರ, ಬೆಂಗಳೂರಿನ ಅಭಿಮಾನಿಗಳು ತಮ್ಮ ತಂಡವನ್ನು ಸ್ವಾಗತಿಸಲು ಬೆಳಿಗ್ಗೆಯಿಂದಲೇ ಬೀದಿಗಳಲ್ಲಿ ನೆರೆದಿದ್ದರು. ಅಲ್ಲದೆ ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಬೇಕಿತ್ತು. ಆದರೆ ರಸ್ತೆಯಲ್ಲಿ ಸಾವಿರಾರು ಜನಸಂದಣಿ ಇದ್ದ ಕಾರಣ ಅದನ್ನು ರದ್ದುಗೊಳಿಸಬೇಕಾಯಿತು. ವರದಿಗಳ ಪ್ರಕಾರ, ಈ ಮಧ್ಯೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ಉಂಟಾಗಿ ಈ ಅವಘಡ ಸಂಭವಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ