
ಭಾರತ ಮತ್ತು ಪಾಕಿಸ್ತಾನ್ ನಡುವಣ ಕದನ ವಿರಾಯದ ಬೆನ್ನಲ್ಲೇ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) ಉಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿಯಂತೆ ಮೇ 17 ರಿಂದ ಐಪಿಎಲ್ ಸೀಸನ್-18 ಗೆ ಮತ್ತೆ ಚಾಲನೆ ದೊರೆಯಲಿದೆ. ಆದರೆ ಈ ಬಾರಿ ಕೇವಲ 6 ನಗರಗಳಲ್ಲಿ ಮಾತ್ರ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಮೇ 17 ರಿಂದ ಜೂನ್ 3 ರವರೆಗೆ ಆರು ನಗರಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ.
ಹೊಸ ವೇಳಾಪಟ್ಟಿಯಲ್ಲಿ 5 ನಗರಗಳನ್ನು ಕೈ ಬಿಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಈ ನಗರಗಳು ಭಾರತ ಮತ್ತು ಪಾಕಿಸ್ತಾನ್ ನಡುವಣ ಗಡಿಗೆ ಹತ್ತಿರದಲ್ಲಿರುವುದು. ಹೀಗಾಗಿ ಕೆಲ ಸ್ಟೇಡಿಯಂಗಳಲ್ಲಿ ಪಂದ್ಯವನ್ನು ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ.
ಈ ಬಾರಿಯ ಐಪಿಎಲ್ ಒಟ್ಟು 13 ಸ್ಡೇಡಿಯಂಗಳಲ್ಲಿ ನಡೆದಿದ್ದವು. ಇದೀಗ ಈ ಹದಿಮೂರು ನಗರಗಳಿಂದ ಕೇವಲ 6 ನಗರಗಳನ್ನು ಮಾತ್ರ ಕೊನೆಯ 17 ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಅದರಂತೆ ಈ ಬಾರಿ ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಮುಂಬೈ ಮತ್ತು ಅಹಮದಾಬಾದ್ನಲ್ಲಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಎರಡು ಹೋಮ್ ಗ್ರೌಂಡ್ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಪಂಜಾಬ್ ಕಿಂಗ್ಸ್ ಮುಲ್ಲನ್ಪುರ್ ಹಾಗೂ ಧರ್ಮಶಾಲಾದಲ್ಲಿ ಕಣಕ್ಕಿಳಿದರೆ, ರಾಜಸ್ಥಾನ್ ರಾಯಲ್ಸ್ ಜೈಪುರ ಹಾಗೂ ಗುವಾಹಟಿಯಲ್ಲಿ ಪಂದ್ಯಗಳನ್ನಾಡಿತ್ತು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೆಹಲಿ ಹಾಗೂ ವಿಶಾಖಪಟ್ಟಣಗಳಲ್ಲಿ ಕಣಕ್ಕಿಳಿದಿತ್ತು.
ಇದೀಗ ಧರ್ಮಶಾಲಾ, ಮುಲ್ಲನ್ಪುರ್ ಹಾಗೂ ಕೊಲ್ಕತ್ತಾದ ಸ್ಟೇಡಿಯಂಗಳನ್ನು ಬಿಸಿಸಿಐ ಕೈ ಬಿಟ್ಟಿದೆ. ಈ ನಗರಗಳು ಭಾರತದ ಗಡಿಗೆ ಹತ್ತಿರದಲ್ಲಿರುವ ಕಾರಣ ಪಂದ್ಯವನ್ನು ನಡೆಸದಿರಲು ನಿರ್ಧರಿಸಲಾಗಿದೆ. ಇನ್ನು ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪಂದ್ಯಕ್ಕೆ ನಿರೀಕ್ಷಿತ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಉಳಿದ ಪಂದ್ಯಗಳನ್ನು ಅಲ್ಲಿ ಆಯೋಜಿಸದಿರಲು ತೀರ್ಮಾನಿಸಲಾಗಿದೆ.
ಹಾಗೆಯೇ ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಎರಡು ಪಂದ್ಯಗಳನ್ನು ಆಡಿ ಆಗಿದೆ. ಹೀಗಾಗಿ ಆ ಮೈದಾನವನ್ನು ಸಹ ಕೈ ಬಿಟ್ಟಿದ್ದಾರೆ. ಇನ್ನು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್ಕೆ ತಂಡದ ತವರು ಮೈದಾನ ಚೆನ್ನೈನ ಚೆಪಾಕ್ ಸ್ಟೇಡಿಯಂ ಹಾಗೂ ಎಸ್ಆರ್ಹೆಚ್ ತಂಡದ ಹೈದರಾಬಾದ್ ಸ್ಟೇಡಿಯಂಗಳನ್ನು ಸಹ ಕೊನೆಯ ಪಂದ್ಯಗಳಿಗೆ ಆಯ್ಕೆ ಮಾಡಲಾಗಿಲ್ಲ ಎಂಬುದು ವಿಶೇಷ.
ಇದನ್ನೂ ಓದಿ: IPL 2025: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ: ಅಂತಿಮ 4 ಪಂದ್ಯ ನಡೆಯುವುದೆಲ್ಲಿ?