
ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಲಿಷ್ಠ ಭಾರತ ತಂಡವನ್ನು ಕಟ್ಟಲು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಭರದ ಸಿದ್ಧತೆ ನಡೆಸುತ್ತಿದೆ. ಸದ್ಯ ಭಾರತೀಯ ಕ್ರಿಕೆಟ್ ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಇಲ್ಲದಿರುವುದು. ಈ ಸಮಸ್ಯೆಯನ್ನು ನೀಗಿಸಲು, ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಮುಂದಿನ ಪ್ರಮುಖ ಒನ್ ಡೇ ಆಲ್‌ರೌಂಡರ್ ಆಗಿ ರೂಪಿಸಲು ಗಂಭೀರ ಚಿಂತನೆ ನಡೆಸಿದ್ದಾರೆ.
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಸದ್ಯ ಶ್ರೇಯಸ್ ಅಯ್ಯರ್ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ಆದರೆ, ದೀರ್ಘಾವಧಿಯ ಟೂರ್ನಿಗಳಲ್ಲಿ ಅವರ ಬ್ಯಾಕ್-ಅಪ್ ರೂಪದಲ್ಲಿ ಒಬ್ಬ ಬಲಿಷ್ಠ ಆಟಗಾರನ ಅವಶ್ಯಕತೆಯಿದೆ. ಈ ಸ್ಥಾನಕ್ಕೆ ತಿಲಕ್ ವರ್ಮಾ ಸೂಕ್ತ ಅಭ್ಯರ್ಥಿ ಎಂದು ಆಯ್ಕೆಗಾರರು ಗುರುತಿಸಿದ್ದಾರೆ.
ತಿಲಕ್ ವರ್ಮಾ ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲದೆ, ಉಪಯುಕ್ತ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬಲಗೈ ಬ್ಯಾಟರ್‌ಗಳೇ ತುಂಬಿರುವ ಭಾರತದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಎಡಗೈ ಬ್ಯಾಟರ್ ಆಗಿ ತಿಲಕ್ ವರ್ಮಾ ಸೇರ್ಪಡೆಯಾದರೆ ಅದು ತಂಡಕ್ಕೆ ಹೆಚ್ಚಿನ ಸಮತೋಲನ ನೀಡುತ್ತದೆ ಎಂಬುದು ಮ್ಯಾನೇಜ್‌ಮೆಂಟ್‌ನ ಲೆಕ್ಕಾಚಾರವಾಗಿದೆ.
ಹೀಗಾಗಿಯೇ ಬೌಲಿಂಗ್ ಮೇಲೆಯೂ ಹೆಚ್ಚಿನ ಗಮನ ಹರಿಸುವಂತೆ ಟೀಮ್ ಮ್ಯಾನೇಜ್‌ಮೆಂಟ್ ತಿಲಕ್ ವರ್ಮಾಗೆ ಸೂಚನೆ ನೀಡಿದೆ. ಅದರಂತೆ ಮುಂಬರುವ ದೇಶೀಯ ಟೂರ್ನಿಗಳಲ್ಲಿ ತಿಲಕ್ ಬೌಲಿಂಗ್ನತ್ತ ಕೂಡ ಹೆಚ್ಚಿನ ಗಮನ ಹರಿಸಲಿದ್ದಾರೆ.
ಸದ್ಯ ದೇಶಿ ಕ್ರಿಕೆಟ್‌ನ ಪ್ರಮುಖ ಟೂರ್ನಿಯಾದ ದುಲೀಪ್ ಟ್ರೋಫಿಯಲ್ಲಿ ಸೌತ್ ಝೋನ್ ತಂಡವನ್ನು ಮುನ್ನಡೆಸುತ್ತಿರುವ ತಿಲಕ್ ವರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದ ವೇಳೆ ಭಾರತದ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ತಿಲಕ್ ವರ್ಮಾ ಅವರಂತಹ ಯುವ ಪ್ರತಿಭೆಗಳಿಗೆ ಮಧ್ಯಮ ಕ್ರಮಾಂಕದಲ್ಲಿ ಸತತ ಅವಕಾಶಗಳನ್ನು ನೀಡಲು ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸಿದೆ.
ಇದನ್ನೂ ಓದಿ: 47 ಎಸೆತಗಳಲ್ಲಿ ಪಂದ್ಯ ಮುಗಿಸಿದ ಶ್ರೀಲಂಕಾ!
ಈ ಮೂಲಕ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರಂತೆ ಬ್ಯಾಟಿಂಗ್ ಜೊತೆಗೆ ನಿರ್ಣಾಯಕ ಸಂದರ್ಭಗಳಲ್ಲಿ ಉಪಯುಕ್ತ ಓವರ್‌ಗಳನ್ನು ಎಸೆಯಬಲ್ಲ ಸಮರ್ಥ ‘ಪಾರ್ಟ್-ಟೈಮ್’ ಆಲ್‌ರೌಂಡರ್ ಒಬ್ಬರನ್ನು ರೂಪಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮ್ಯಾನೇಜ್‌ಮೆಂಟ್‌ನ ಈ ದೀರ್ಘಾವಧಿಯ ಯೋಜನೆಗೆ ತಿಲಕ್ ವರ್ಮಾ ಅವರೇ ಅಂತಿಮ ಪರಿಹಾರವಾಗಬಲ್ಲರೇ ಎಂಬುದನ್ನು ಮುಂಬರುವ ಸರಣಿಗಳಲ್ಲಿ ಕಾದುನೋಡಬೇಕಿದೆ.