ENG vs AUS: ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದಾಖಲೆ ಬರೆದ ಬೆನ್ ಡಕೆಟ್
Ben Duckett's Century: ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಬೆನ್ ಡಕೆಟ್ ಅವರು ಅದ್ಭುತವಾದ 165 ರನ್‌ಗಳ ಇನ್ನಿಂಗ್ಸ್ ಆಡಿ ಇಂಗ್ಲೆಂಡ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ರನ್‌ಗಳ ದಾಖಲೆಯಾಗಿದೆ. ಈ ಮೂಲಕ ಡಕೆಟ್, ಜೋ ರೂಟ್ ಅವರ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.
Updated on:Feb 22, 2025 | 10:27 PM

ಪಾಕಿಸ್ತಾನದ ಗಡಾಫಿ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ಪರ ಬೆನ್ ಡಕೆಟ್ ಅದ್ಭುತ ಪ್ರದರ್ಶನ ನೀಡಿ ಶತಕದ ಇನ್ನಿಂಗ್ಸ್ ಆಡಿ ಅದ್ಭುತ ಸಾಧನೆ ಮಾಡಿದರು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಪರ ಅತಿದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಬರೋಬ್ಬರಿ 165 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ಬೆನ್ ಡಕೆಟ್, ಜೋ ರೂಟ್ ಅವರನ್ನು ಹಿಂದಿಕ್ಕಿದಲ್ಲದೆ, ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಬರೆದ ಡಕೆಟ್ 143 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 165 ರನ್ ಗಳಿಸಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟರ್ ಒಬ್ಬ 150 ರನ್‌ಗಳ ಗಡಿ ತಲುಪಿದ ಶ್ರೇಯ ಡಕೆಟ್ ಪಾಲಾಗಿದೆ. ಡಕೆಟ್‌ಗಿಂತ ಮೊದಲು, ಪಂದ್ಯಾವಳಿಯಲ್ಲಿ ಅತ್ಯಧಿಕ ಇನ್ನಿಂಗ್ಸ್‌ಗಳ ದಾಖಲೆಯನ್ನು ನಾಥನ್ ಆಸ್ಟಲ್ ಮತ್ತು ಆಂಡಿ ಫ್ಲವರ್ ಹೊಂದಿದ್ದರು.

ಈ ಪಂದ್ಯದಲ್ಲಿ 165 ರನ್ ಬಾರಿಸುವ ಮೂಲಕ ಡಕೆಟ್ ಎರಡು ದಶಕಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 2004 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್‌ನ ಮಾಜಿ ಆರಂಭಿಕ ಆಟಗಾರ ಆಸ್ಟ್ಲೆ 151 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳ ಸಹಿತ ಅಜೇಯ 145 ರನ್ ಬಾರಿಸಿದ್ದರು.

ಹಾಗೆಯೇ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಪ್ಲೋವರ್ 2002 ರಲ್ಲಿ ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 164 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 145 ರನ್ ಗಳಿಸಿದ್ದರು. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 141 ರನ್, ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 141 ರನ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಇಂಗ್ಲೆಂಡ್ ವಿರುದ್ಧ 141 ರನ್‌ಗಳ ಇನ್ನಿಂಗ್ಸ್ ಆಡಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Published On - 10:26 pm, Sat, 22 February 25
























