Ben Stokes: ‘ಪೂರ ಹಣವನ್ನು ಪಾಕ್ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿದ್ದೇನೆ’; ಹೃದಯ ವೈಶಾಲ್ಯತೆ ಮೆರೆದ ಬೆನ್ ಸ್ಟೋಕ್ಸ್..!
Pakistan vs England: ಈ ಟೆಸ್ಟ್ ಸರಣಿಯಲ್ಲಿನ ನನ್ನ ಸಂಪೂರ್ಣ ಪಂದ್ಯದ ಶುಲ್ಕವನ್ನು ಪಾಕಿಸ್ತಾನದ ಪ್ರವಾಹ ನಿಧಿಗೆ ನೀಡುತ್ತೇನೆ. ಈ ದೇಣಿಗೆಯಿಂದ ಪಾಕಿಸ್ತಾನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವಲ್ಪವಾದರೂ ಸಹಾಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಟೋಕ್ಸ್ ಟ್ವೀಟ್ ಮಾಡಿದ್ದಾರೆ.
ಟಿ20 ವಿಶ್ವಕಪ್ (T20 World Cup 2022) ಬಳಿಕ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (Pakistan and England) ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದು, ಈ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 1 ರಿಂದ ರಾವಲ್ಪಿಂಡಿಯಲ್ಲಿ (Rawalpindi) ಆರಂಭವಾಗಲಿದೆ. ಈ ಟೆಸ್ಟ್ ಸರಣಿಯು ಪಾಕಿಸ್ತಾನಕ್ಕೆ ತುಂಬಾ ವಿಶೇಷವಾಗಿದ್ದು, ಬರೋಬ್ಬರಿ 17 ವರ್ಷಗಳ ನಂತರ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ಆದರೆ ಈ ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ಮಹತ್ವದ ಹೇಳಿಕೆ ನೀಡಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes ), ಪಾಕಿಸ್ತಾನಿ ಜನರ ಹೃದಯವನ್ನು ಗೆದ್ದಿದ್ದಾರೆ. ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಬೆನ್ ಸ್ಟೋಕ್ಸ್, ನಾನು ಮೊದಲ ಬಾರಿಗೆ ಪಾಕ್ ಪ್ರವಾಸ ಮಾಡಿದ್ದು, ಇದು ನನಗೆ ಐತಿಹಾಸಿಕ ಸರಣಿಯಾಗಿದೆ. ಹೀಗಾಗಿ ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ ನನಗೆ ಪಂದ್ಯ ಶುಲ್ಕದ ರೂಪದಲ್ಲಿ ಸಿಗುವ ಅಷ್ಟೂ ಹಣವನ್ನು ಪಾಕಿಸ್ತಾನದ ಪ್ರವಾಹ ಪೀಡಿತರಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು
ಹೃದಯ ಗೆದ್ದ ಬೆನ್ ಸ್ಟೋಕ್ಸ್
ಈ ಕುರಿತು ಟ್ವೀಟ್ ಮಾಡಿರುವ ಬೆನ್ ಸ್ಟೋಕ್ಸ್, ‘ಐತಿಹಾಸಿಕ ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ಬಂದಿರುವುದು ಅತೀವ ಸಂತಸ ತಂದಿದೆ. 17 ವರ್ಷಗಳ ನಂತರ ನಮ್ಮ ಟೆಸ್ಟ್ ತಂಡ ಪಾಕಿಸ್ತಾನಕ್ಕೆ ಬರುತ್ತಿರುವುದು ರೋಚಕವಾಗಿದೆ. ಈ ವರ್ಷ ಪ್ರವಾಹದಿಂದಾಗಿ ಪಾಕಿಸ್ತಾನಕ್ಕೆ ಅಪಾರ ಹಾನಿಯನ್ನುಂಟ್ಟಾಗಿರುವುದು ದುಃಖಕರವಾಗಿದೆ. ಈ ಆಟವು ನನಗೆ ಜೀವನದಲ್ಲಿ ಬಹಳಷ್ಟು ನೀಡಿದೆ. ಹೀಗಾಗಿ ಕ್ರಿಕೆಟ್‌ಗೆ ಮೀರಿದ ಏನನ್ನಾದರೂ ಮರಳಿ ನೀಡಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ಟೆಸ್ಟ್ ಸರಣಿಯಲ್ಲಿನ ನನ್ನ ಸಂಪೂರ್ಣ ಪಂದ್ಯದ ಶುಲ್ಕವನ್ನು ಪಾಕಿಸ್ತಾನದ ಪ್ರವಾಹ ನಿಧಿಗೆ ನೀಡುತ್ತೇನೆ. ಈ ದೇಣಿಗೆಯಿಂದ ಪಾಕಿಸ್ತಾನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವಲ್ಪವಾದರೂ ಸಹಾಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
I’m donating my match fees from this Test series to the Pakistan Flood appeal ❤️?? pic.twitter.com/BgvY0VQ2GG
— Ben Stokes (@benstokes38) November 28, 2022
ಮೊದಲ ಟೆಸ್ಟ್‌ನಿಂದ ಮಾರ್ಕ್ವುಡ್ ಔಟ್
ಅಂದಹಾಗೆ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಇಂಗ್ಲೆಂಡ್ ತಂಡ ಹಿನ್ನಡೆ ಅನುಭವಿಸಿದೆ. ರಾವಲ್ಪಿಂಡಿ ಟೆಸ್ಟ್‌ನಿಂದ ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಹೊರಗುಳಿದಿದ್ದಾರೆ. ವುಡ್ ಅವರು ಮೊದಲ ಟೆಸ್ಟ್ ಆಡುವುದಿಲ್ಲ ಎಂದು ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ತಿಳಿಸಿದ್ದಾರೆ. ಆದರೂ ಅವರು ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ. ಮೂರು ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 9 ರಂದು ಮುಲ್ತಾನ್‌ನಲ್ಲಿ ನಡೆಯಲಿದೆ. ಡಿಸೆಂಬರ್ 17 ರಿಂದ ಸರಣಿಯ ಕೊನೆಯ ಪಂದ್ಯ ಕರಾಚಿಯಲ್ಲಿ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Mon, 28 November 22