ಪಂದ್ಯ ನಡೆಸಬೇಕೆಂದರೆ..; ಕೆಎಸ್ಸಿಎಗೆ 17 ಷರತ್ತುಗಳನ್ನು ವಿಧಿಸಿದ ಬೆಂಗಳೂರು ಪೊಲೀಸರು
Bengaluru Police Impose 17 Conditions: ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಗೆ ಬೆಂಗಳೂರು ನಗರ ಪೊಲೀಸರು 17 ಷರತ್ತುಗಳನ್ನು ವಿಧಿಸಿದ್ದಾರೆ. ಪಾರ್ಕಿಂಗ್, ಮಹಿಳಾ ಮತ್ತು ಮಕ್ಕಳಿಗೆ ಪ್ರತ್ಯೇಕ ಮಾರ್ಗ, ಬ್ಯಾಗ್ ಸ್ಕ್ಯಾನರ್, ತುರ್ತು ನಿರ್ಗಮನ, ಪ್ರಥಮ ಚಿಕಿತ್ಸಾ ಸೌಲಭ್ಯ ಮುಂತಾದವು ಷರತ್ತುಗಳಲ್ಲಿ ಸೇರಿವೆ. 15 ದಿನಗಳೊಳಗೆ ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಪಂದ್ಯಕ್ಕೆ ಅನುಮತಿ ನೀಡುವ ಸೂಚನೆ ನೀಡಲಾಗಿದೆ.

ಕೆಲವೇ ತಿಂಗಳುಗಳ ಹಿಂದೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ಗೆ (IPL) ರಾಜಾತಿಥ್ಯ ನೀಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಯಾವುದೇ ಪಂದ್ಯಗಳು ನಡೆಯುವುದಿಲ್ಲವೇನೋ ಎಂಬ ಆತಂಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಇದಕ್ಕೆ ಕಾರಣ ಅದೊಂದು ಘೋರ ದುರಂತ. 18 ವರ್ಷಗಳ ಬಳಿಕ ಐಪಿಎಲ್ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದ ಆರ್ಸಿಬಿ (RCB), ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸುವ ಸಲುವಾಗಿ ಸಡಗರದಿಂದಲೇ ಬೆಂಗಳೂರಿಗೆ ಬಂದಿಳಿದಿತ್ತು. ಆದರೆ ಈ ಸಂಭ್ರಮಕ್ಕೆ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆ ಆವರಿಸಿತು. ತನ್ನ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡುವ ಆಸೆಯಿಂದ ಚಿನ್ನಸ್ವಾಮಿ (M. Chinnaswamy Stadium) ಮೈದಾನದತ್ತ ಬಂದ ಅಭಿಮಾನಿಗಳು ಸಾವಿನ ಮನೆ ಕದ ತಟ್ಟಿದ್ದರು.
2 ಪ್ರಮುಖ ಪಂದ್ಯಾವಳಿಗಳು ಶಿಫ್ಟ್
ಈ ದುರಂತದ ಬಳಿಕ ರಾಜ್ಯ ಸರ್ಕಾರ, ನ್ಯಾಯಮುರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣ ಯಾವುದೇ ದೊಡ್ಡ ಸಮಾರಂಭಗಳ ಆಯೋಜನೆಗೆ ಯೋಗ್ಯವಾಗಿಲ್ಲ ಎಂಬ ವರದಿ ನೀಡಿತ್ತು. ಆ ಬಳಿಕ ಈ ಮೈದಾನದಲ್ಲಿ ನಡೆಯಬೇಕಿದ್ದ ಮಹಾರಾಜ ಟಿ20 ಟ್ರೋಫಿ ಆಯೋಜನೆಗೆ ನಗರದ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ಈ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದೀಗ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮಹಿಳೆಯ ಏಕದಿನ ವಿಶ್ವಕಪ್ ಪಂದ್ಯಗಳನ್ನು ಸಹ ನವಿ ಮುಂಬೈಗೆ ಶಿಫ್ಟ್ ಮಾಡಲಾಗಿದೆ.
17 ಷರತ್ತು ವಿಧಿಸಿದ ಪೊಲೀಸರು
ಇದರಿಂದಾಗಿ ಇನ್ನು ಮುಂದೆ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲವಾ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೀಗ ನಗರದ ಪೊಲೀಸರು ಕೆಎಸ್ಸಿಎಗೆ 17 ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಪಂದ್ಯ ನಡೆಸಲು ಅನುಮತಿ ನೀಡುವ ಸುಳಿವು ನೀಡಿದ್ದಾರೆ. ಅಲ್ಲದೆ 15 ದಿನದೊಳಗೆ ಷರತ್ತುಗಳನ್ನು ಪೂರೈಸುವಂತೆ ಕೆಎಸ್ಸಿಎಗೆ ಡೆಡ್ ಲೈನ್ ಕೂಡ ನೀಡಲಾಗಿದೆ.
ನಗರ ಪೊಲೀಸರು ಕೆಎಸ್ಸಿಎಗೆ ವಿಧಿಸಿದ 17 ಷರತ್ತುಗಳಿವು
- ಬರುವ ವಾಹನಗಳಿಗಾಗಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
- ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾದ ಮಾರ್ಗ
- ಎಲ್ಲಾ ಕಡೆಯಲ್ಲೂ ಬ್ಯಾಗ್ ಸ್ಕ್ಯಾನರ್ ಇನ್ಸ್ಟಾಲೇಷನ್ ಮಾಡಬೇಕು
- ಅವಘಡ ಸಂಭವಿಸಿದಾಗ ತೆರಳಲು ಸುರಕ್ಷಿತ ಸ್ಥಳವನ್ನು ಗುರುತಿಸಬೇಕು
- ಜನಸಮೂಹ ಮಾನಿಟರ್ ಮಾಡುವ ವ್ಯವಸ್ಥೆ ಇರಬೇಕು
- ಶಾಶ್ವತವಾಗಿ ಪ್ರಥಮ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು
- ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸೊ ವ್ಯವಸ್ಥೆ
- ಆಟಗಾರರಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ದ್ವಾರ ಇರಬೇಕು
- ಪ್ರತಿ ಬಾರಿಯು ಪೊಲೀಸರಿಂದ ಅನುಮತಿ ಕಡ್ಡಾಯ
- ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು
- ವಿಪತ್ತು ನಿರ್ವಹಣೆ ಮಾರ್ಗಸೂಚಿ ಫಾಲೊ ಮಾಡಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Fri, 22 August 25
