
ಕ್ರಿಕೆಟ್ ಮೈದಾನದಲ್ಲಿ ರನೌಟ್ಗಳು ಸಾಮಾನ್ಯ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟ್ ಆದ ರೀತಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಕೆಟ್ ಕೀಪರ್ ಕಾಲಿನ ಕೆಳಗೆ ಬ್ಯಾಟ್ ಸಿಲುಕಿಕೊಂಡ ಕಾರಣ, ಕ್ರೀಸ್ ತಲುಪಲು ಸಾಧ್ಯವಾಗದೆ ಅವರು ವಿಚಿತ್ರವಾಗಿ ವಿಕೆಟ್ ಕೈಚೆಲ್ಲಿದ್ದಾರೆ.
ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಈ ಅನಿರೀಕ್ಷಿತ ಹಾಗೂ ವಿವಾದಾತ್ಮಕ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಪ್ರಿಯಾಂಶ್ ಆರ್ಯ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.
ಭಾರತ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್-ಆಫ್ ಕಡೆಗೆ ಚೆಂಡನ್ನು ಬಾರಿಸಿ, ಎರಡನೇ ರನ್ ಗಳಿಸಲು ಪ್ರಿಯಾಂಶ್ ಆರ್ಯ ಅವರಿಗೆ ಕರೆ ನೀಡಿದರು. ಆದರೆ ಆರ್ಯ ಆರಂಭದಲ್ಲಿ ಓಡಲು ಹಿಂಜರಿದರು. ಅಷ್ಟರಲ್ಲಾಗಲೇ ಗಾಯಕ್ವಾಡ್ ಪಿಚ್‌ನ ಮಧ್ಯಭಾಗವನ್ನು ದಾಟಿ ವೇಗವಾಗಿ ಧಾವಿಸಿ ಬಂದಿದ್ದರು.
ಈ ಗೊಂದಲದಿಂದಾಗಿ ಇಬ್ಬರೂ ಬ್ಯಾಟರ್‌ಗಳು ರನ್ ಔಟ್‌ನಿಂದ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಒಂದೇ ತುದಿಯ (ಸ್ಟ್ರೈಕರ್ ಎಂಡ್) ಕ್ರೀಸ್‌ನತ್ತ ಓಡಿದರು.
ಸ್ಟ್ರೈಕರ್ ಎಂಡ್ನಲ್ಲಿದ್ದ ಪ್ರಿಯಾಂಶ್ ಆರ್ಯ ತಿರುಗಿ ನಿಂತು ಕ್ರೀಸ್ಗೆ ಬ್ಯಾಟ್ ಹಿಡಲು ಮುಂದಾದಾಗ, ಚೆಂಡನ್ನು ಹಿಡಿಯಲು ನಿಂತಿದ್ದ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಕಾಲಿನಲ್ಲಿ ಬ್ಯಾಟ್ ಅನ್ನು ಲಾಕ್ ಮಾಡಿದರು.
ಡಿಕ್ವೆಲ್ಲಾ ಕಾಲು ಅಡ್ಡ ಬಂದಿದ್ದರಿಂದ ಆರ್ಯ ಅವರಿಗೆ ಬ್ಯಾಟನ್ನು ಕ್ರೀಸ್‌ನ ಗೆರೆಯ ಒಳಗೆ ಸ್ಲೈಡ್ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ರುತುರಾಜ್ ಗಾಯಕ್ವಾಡ್ ಮೊದಲಿಗನಾಗಿ ಕ್ರೀಸ್‌ನೊಳಗೆ ಬ್ಯಾಟ್ ಇಟ್ಟು ಸುರಕ್ಷಿತರಾದರು. ತಕ್ಷಣವೇ ಎಚ್ಚೆತ್ತ ವಿಕೆಟ್ ಕೀಪರ್ ಡಿಕ್ವೆಲ್ಲಾ, ಚೆಂಡನ್ನು ನಾನ್-ಸ್ಟ್ರೈಕರ್ ತುದಿಗೆ ಎಸೆದು ಸ್ಟಂಪ್ ಉರುಳಿಸಿದರು.
Weird way to get run out 😭😭
What’s happening, Priyansh Arya got stopped by Dickwella to save Ruturaj 😭 pic.twitter.com/sLOFIg50VT
— HK (@potter_here18) June 9, 2026
ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರೂ ಬ್ಯಾಟರ್‌ಗಳು ಒಂದೇ ಕ್ರೀಸ್‌ನತ್ತ ಓಡಿ ಬಂದಾಗ ಗಾಯಕ್ವಾಡ್ ಮೊದಲು ಗೆರೆ ದಾಟಿದ್ದು ಸ್ಪಷ್ಟವಾಗಿ ತಿಳಿಯಿತು. ಹೀಗಾಗಿ ನಿಯಮದ ಪ್ರಕಾರ ಪ್ರಿಯಾಂಶ್ ಆರ್ಯ (32 ರನ್) ಔಟ್ ಎಂದು ಘೋಷಿಸಲಾಯಿತು. ಆದರೆ ಈ ತೀರ್ಪು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏಕೆಂದರೆ ವಿಕೆಟ್ ಕೀಪರ್ ಕಾಲು ಅಡ್ಡ ಇಟ್ಟು ಬ್ಯಾಟನ್ನು ತಡೆದಿದ್ದರಿಂದ ಇದು ಕ್ರಿಕೆಟ್‌ನ ‘ಎಂಸಿಸಿ ನಿಯಮ 37’ ಅಡಿಯಲ್ಲಿ ಬರುತ್ತದೆ ಎಂದು ಅನೇಕ ಅಭಿಮಾನಿಗಳು ವಾದಿಸಿದ್ದಾರೆ. ಅಂದರೆ ಫೀಲ್ಡಿಂಗ್ ಅಥವಾ ಬ್ಯಾಟಿಂಗ್ಗೆ ಅಡ್ಡಿಪಡಿಸಿದ ನಿಯಮದಡಿಯಲ್ಲಿ ಇದನ್ನು ನಾಟೌಟ್ ಎಂದು ಪರಿಗಣಿಸಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿ… ‘ಲಾರ್ಡ್ಸ್’ ಪಿಚ್ಗೆ ಡಿಮೆರಿಟ್ ಪಾಯಿಂಟ್!
ಮೇಲ್ನೋಟಕ್ಕೆ ಡಿಕ್ವೆಲ್ಲಾ ಉದ್ದೇಶಪೂರ್ವಕವಾಗಿ ಕಾಲು ಇಟ್ಟಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅಂಪೈರ್‌ಗಳು ಪರಿಗಣಿಸಿದ್ದರಿಂದ ಪ್ರಿಯಾಂಶ್ ಆರ್ಯ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಈ ವಿಚಿತ್ರ ಗೊಂದಲದ ಹೊರತಾಗಿಯೂ ಭಾರತ ‘ಎ’ ತಂಡ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.