
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಮುಂದಿನ ವರ್ಷ ಅಂದರೆ ಜನವರಿ 21 ರಿಂದ ಮಾರ್ಚ್ 3, 2027 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಯಾಗಬಹುದು. ವಾಸ್ತವವಾಗಿ ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಸರಣಿಯ ನಾಲ್ಕನೇ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಈ ಪಂದ್ಯದ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಜನವರಿ ಮತ್ತು ಫೆಬ್ರವರಿಯಲ್ಲಿ ದೇಶದ ಪೂರ್ವ ಭಾಗದಲ್ಲಿ ಸೂರ್ಯ ಬೇಗನೆ ಮುಳುಗುವುದರಿಂದ ಬೆಳಕಿನ ಕೊರತೆ ಉಂಟಾಗುತ್ತದೆ. ಇದು ಆಟಕ್ಕೆ ಅಡ್ಡಿಪಡಿಸಬಹುದು ಎಂಬುದು ಬಿಸಿಸಿಐನ ಕಳವಳ ಕಾರಣವಾಗಿದೆ. ಸೂರ್ಯಸ್ತ ಬೇಗನೆ ಆಗುವ ಕಾರಣದಿಂದ ಪ್ರತಿದಿನ 90 ಓವರ್‌ಗಳ ಆಟವನ್ನು ನಡೆಸುವುದು ಕಷ್ಟವಾಗಬಹುದು. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಅದರಲ್ಲೂ ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿರುವ ಭಾರತ ತಂಡಕ್ಕೆ ಎಲ್ಲಾ ಪಂದ್ಯಗಳ ಫಲಿತಾಂಶ ಹೊರಬೀಳುವುದು ಅತ್ಯವಶ್ಯಕವಾಗಿದೆ.
ಮೇಲೆ ಹೇಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿರುವ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯು ನಿರ್ಣಾಯಕವಾಗಿದೆ. ಆದಾಗ್ಯೂ, ಪೂರ್ವ ಭಾರತದ ರಾಂಚಿಯಲ್ಲಿ ಫೆಬ್ರವರಿ ಮೂರನೇ ವಾರದಲ್ಲಿ (ಫೆಬ್ರವರಿ 19-23) ಸಂಜೆ 4:30 ರಿಂದ 5:00 ರ ನಡುವೆ ಕತ್ತಲೆ ಆವರಿಸುತ್ತದೆ. ಇದು ಆಟದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಡ್ರಾ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ತೀವ್ರ ಚಳಿಯಿಂದಾಗಿ ಪಿಚ್ ಭಾರತದ ಸ್ಪಿನ್ ತಂತ್ರಕ್ಕೆ ಅನುಕೂಲಕರವಾಗಿರುವುದಿಲ್ಲ ಎಂದು ತಂಡದ ಆಡಳಿತ ಮಂಡಳಿ ನಂಬಿದೆ. ಪರಿಣಾಮವಾಗಿ, ಪಂದ್ಯವನ್ನು ಹಗಲು ಬೆಳಕು ಸಮಸ್ಯೆಯಿಲ್ಲದ ಸ್ಥಳಕ್ಕೆ ಸ್ಥಳಾಂತರಿಸಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ.
ವಿಶಾಖಪಟ್ಟಣಂ, ಹೈದರಾಬಾದ್ ಅಥವಾ ರಾಜ್‌ಕೋಟ್ ಈ ಮೂರು ನಗರಗಳ ಒಂದು ಸ್ಥಳದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನು ನಡೆಸುವ ಸಾಧ್ಯತೆಗಳಿವೆ. ಏತನ್ಮಧ್ಯೆ, ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಫೆಬ್ರವರಿ 11 ಮತ್ತು 15 ರ ನಡುವೆ ಅಸ್ಸಾಂನ ಗುವಾಹಟಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಶಾನ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಗುವಾಹಟಿ ತನ್ನ ಆತಿಥೇಯ ಹಕ್ಕುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಗುವಾಹಟಿ ಟೆಸ್ಟ್‌ನ ಆರಂಭದ ಸಮಯವನ್ನು ಬದಲಾಯಿಸಬಹುದು ಮತ್ತು ಪಂದ್ಯವು ಸುಮಾರು 30 ನಿಮಿಷಗಳ ಮೊದಲು ಪ್ರಾರಂಭವಾಗಬಹುದು.
ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?