
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡವು ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಖಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 155 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಇನಿಂಗ್ಸ್ಗೆ ಮಳೆ ಅಡಚಣೆಯನ್ನುಂಟು ಮಾಡಿದ ಪರಿಣಾಮ ಡಕ್ವರ್ತ್ ಲೂಯಿಸ್ ಪ್ರಕಾರ, 19 ಓವರ್ಗಳಲ್ಲಿ 147 ರನ್ಗಳ ಗುರಿ ನೀಡಲಾಯಿತು. 19ನೇ ಓವರ್ನ ಅಂತಿಮ ಎಸೆತದಲ್ಲಿ ಈ ಗುರಿಯನ್ನು ಮುಟ್ಟುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಟಿ20 ಕ್ರಿಕೆಟ್ನಲ್ಲಿ ನೋ ಬಾಲ್ ಎಸೆಯುವುದು ಪರಮ ಅಪರಾಧ ಎಂದು ಬಣ್ಣಿಸಿದರು. ಏಕೆಂದರೆ ಈ ಪಂದ್ಯದ ಕೊನೆಯ ಓವರ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 15 ರನ್ಗಳ ಅವಶ್ಯಕತೆಯಿತ್ತು. ಈ ನಿರ್ಣಾಯಕ ಓವರ್ನಲ್ಲಿ ದೀಪಕ್ ಚಹರ್ ನೋ ಬಾಲ್ ಎಸೆಯುವ ಮೂಲಕ ಹೆಚ್ಚುವರಿ ರನ್ಗಳನ್ನು ಬಿಟ್ಟು ಕೊಟ್ಟಿದ್ದರು. ಇದನ್ನೆ ಪರೋಕ್ಷವಾಗಿ ಹಾರ್ದಿಕ್ ಪಾಂಡ್ಯ ನೋ ಬಾಲ್ ಎಸೆಯುವುದು ಅಪರಾಧ ಎಂದು ಬಣ್ಣಿಸಿದ್ದಾರೆ.
ವಿಶೇಷ ಎಂದರೆ ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಓವರ್ನಲ್ಲಿ ಎರಡು ನೋ ಬಾಲ್ ಮಾಡಿದ್ದರು. ಈ ನೋ ಬಾಲ್ ಮೂಲಕ ನೀಡಲಾದ ಫ್ರೀ ಹಿಟ್ ಎಸೆತದಲ್ಲಿ ಶುಭ್ಮನ್ ಗಿಲ್ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೊನೆಯ ನೋ ಬಾಲ್ ಅನ್ನು ಪ್ರಸ್ತಾಪಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಇನ್ನು ಈ ಪಂದ್ಯದ ಸೋಲನ್ನು ವಿಮರ್ಶಿಸಿದ ಹಾರ್ದಿಕ್ ಪಾಂಡ್ಯ, ಕಡಿಮೆ ಸ್ಕೋರ್ಗಳಿಸಿದರೂ ನಾವು ಉತ್ತಮ ಪೈಪೋಟಿ ನೀಡಿದ್ದೇವೆ ಎಂದು ಭಾವಿಸುತ್ತೇನೆ. ಏಕೆಂದರೆ 150 ರನ್ಗಳು ಕಠಿಣ ಸಾವಾಲಾಗಿರಲಿಲ್ಲ. ನಾವು ಇನ್ನೂ 25 ರನ್ಗಳನ್ನು ಹೆಚ್ಚು ಗಳಿಸಬೇಕಿತ್ತು. ಇದಾಗ್ಯೂ ನಮ್ಮ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಕೊನೆಯವರೆಗೆ ಹೋರಾಟ ಮುಂದುವರೆಸುವ ಮೂಲಕ ಪಂದ್ಯ ಗೆಲ್ಲಲು ಶ್ರಮಿಸಿದ್ದರು. ಹೀಗಾಗಿ ನಮ್ಮ ಬೌಲರ್ಗಳು ಅಭಿನಂದನೆಗೆ ಅರ್ಹರು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ: IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುತ್ತೆ..!
ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿರುವ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಇದಾಗ್ಯೂ ಮುಂಬೈ ಪಡೆಗೆ ಇನ್ನೂ 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಪ್ಲೇಆಫ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶವಿದೆ.
Published On - 10:55 am, Wed, 7 May 25