BPL ನಲ್ಲಿ ಆಟಗಾರರ ನಡುವೆ ಭುಜಬಲದ ಪರಾಕ್ರಮ

|

Updated on: Jan 13, 2025 | 10:34 AM

Mohammad Nawaz vs Tanzim Hasan: ಮೆಲ್ಬೋರ್ನ್​ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಯಾಮ್ ಕೊನ್​ಸ್ಟಾಸ್ ಅವರನ್ನು ಭುಜದಿಂದ ಗುದ್ದಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಅದೇ ರೀತಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ನವಾಝ್ ಹಾಗೂ ಬಾಂಗ್ಲಾದೇಶ್ ವೇಗಿ ತಂಝೀಮ್ ಹಸನ್ ಬಿಪಿಎಲ್​ನಲ್ಲಿ ಕಿತ್ತಾಡಿಕೊಂಡಿದ್ದಾರೆ.

BPL ನಲ್ಲಿ ಆಟಗಾರರ ನಡುವೆ ಭುಜಬಲದ ಪರಾಕ್ರಮ
Mohammad Nawaz vs Tanzim Hasan Sakib
Follow us on

ಮೈದಾನದಲ್ಲಿ ಭುಜಬಲದ ಪರಾಕ್ರಮ ಹೊಸ ಟ್ರೆಂಡ್ ಆಗಿ ಮಾರ್ಪಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್​ಸ್ಟಾಸ್ ನಡುವೆ ಕಂಡು ಬಂದ ಭುಜದ ಗುದ್ದಾಟವನ್ನು ನೆಪಿಸುವಂತಹ ಘಟನೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ನಡೆದಿದೆ. ಎಸ್​ಐಸಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಖುಲ್ನಾ ಟೈಗರ್ಸ್ ಮತ್ತು ಸಿಲ್ಹೆಟ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಖುಲ್ನಾ ಟೈಗರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಲ್ಹೆಟ್ ಸ್ಟ್ರೈಕರ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.

183 ರನ್​ಗಳ ಗುರಿ ಬೆನ್ನತ್ತಿದ ಖುಲ್ನಾ ಟೈಗರ್ಸ್ ತಂಡಕ್ಕೆ ವಿಲಿಯಂ ಬೊಸಿಸ್ಟೊ (43) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಇತರೆ ಬ್ಯಾಟರ್​​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಆದರೆ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ನವಾಝ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದರು. 17 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​​ಗಳೊಂದಿಗೆ 33 ರನ್ ಬಾರಿಸಿದ ನವಾಝ್ ಖುಲ್ನಾ ಟೈಗರ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.

ಭುಜಬಲದ ಪರಾಕ್ರಮ:

ಒಂದೆಡೆ ಮೊಹಮ್ಮದ್ ನವಾಝ್ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಸಿಲ್ಹೆಟ್ ಸ್ಟ್ರೈಕರ್ಸ್ ಬೌಲರ್​ಗಳು ವಿಕೆಟ್ ಪಡೆಯಲು ಹರಸಾಹಸಪಟ್ಟರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ 4 ಓವರ್​ಗಳ ವೇಳೆ ನವಾಝ್ ವಿಕೆಟ್ ಪಡೆಯುವುದು ಸಿಲ್ಹೆಟ್ ತಂಡದ ಪಾಲಿಗೆ ಅನಿವಾರ್ಯವಾಗಿತ್ತು.

ಈ ಹಂತದಲ್ಲಿ ದಾಳಿಗಿಳಿದ ತಂಝೀಮ್ ಹಸನ್ ಸಾಕಿಬ್ ಸ್ಲೋ ಎಸೆತದಲ್ಲಿ ಮೊಹಮ್ಮದ್ ನವಾಝ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಔಟಾಗಿ ಹೊರ ನಡೆಯುತ್ತಿದ್ದ ನವಾಝ್ ಅವರನ್ನು ನೋಡಿ ತಂಝೀಮ್ ಅದೇನೊ ಗೊಣಗಿದ್ದಾರೆ.

ಅತ್ತ ಮೊದಲೇ ಔಟಾದ ಕೋಪದಲ್ಲಿದ್ದ ಮೊಹಮ್ಮದ್ ನವಾಝ್ ನೇರವಾಗಿ ಹೋಗಿ ತಂಝೀಮ್ ಹಸನ್ ಸಾಕಿಬ್ ಅವರನ್ನು ಭುಜದಿಂದ ಗುದ್ದಿದ್ದಾರೆ. ಈ ಭುಜಬಲದ ಪರಾಕ್ರಮದೊಂದಿಗೆ ಇಬ್ಬರ ನಡುವಿನ ಮಾತಿನ ಚಕಮಕಿ ಕೂಡ ಶುರುವಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ… 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಸಹ ಆಟಗಾರರು ಮತ್ತು ಅಂಪೈರ್ ಇಬ್ಬರು ದೂರ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಮೊಹಮ್ಮದ್ ನವಾಝ್ ಹಾಗೂ ತಂಝೀಮ್ ಹಸನ್ ನಡುವಣ ಭುಜಬಲದ ಪರಾಕ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನವಾಝ್-ತಂಝೀಮ್ ಕಿತ್ತಾಟದ ವಿಡಿಯೋ:

ಇನ್ನು ಈ ಪಂದ್ಯದಲ್ಲಿ 183 ರನ್​ಗಳ ಗುರಿ ಬೆನ್ನತ್ತಿದ ಖುಲ್ನಾ ಟೈಗರ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಲ್ಹೆಟ್ ಸ್ಟ್ರೈಕರ್ಸ್ ತಂಡವು 8 ರನ್​ಗಳ ರೋಚಕ ಜಯ ಸಾಧಿಸಿತು.

 

Published On - 10:32 am, Mon, 13 January 25