AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿಯಿಂದ ಹೊರಬಂದು ಹೊಸ ಇತಿಹಾಸ ಬರೆದ ಬ್ರೆಂಡನ್ ಟೇಲರ್

ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ವೃತ್ತಿಜೀವನ ಹೊಂದಿರುವ ಝಿಂಬಾಬ್ವೆ ತಂಡದ ಅನುಭವಿ ದಾಂಡಿಗ ಬ್ರೆಂಡನ್ ಟೇಲರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಂಡಿ ಫ್ಲವರ್​ ಅವರ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ನಿವೃತ್ತಿಯಿಂದ ಹೊರಬಂದು ಹೊಸ ಇತಿಹಾಸ ಬರೆದ ಬ್ರೆಂಡನ್ ಟೇಲರ್
Brendan Taylor Image Credit source: GettyImages
ಝಾಹಿರ್ ಯೂಸುಫ್
|

Updated on: Oct 18, 2026 | 1:02 PM

Share

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಯುಎಇ ಏಕದಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಝಿಂಬಾಬ್ವೆಯ ಅನುಭವಿ ಬ್ಯಾಟರ್ ಬ್ರೆಂಡನ್ ಟೇಲರ್ ಭರ್ಜರಿ ಬ್ಯಾಟಿಂಗ್ ನಡೆಸಿ 23 ವರ್ಷಗಳ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಟೇಲರ್, ಝಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲೇ ಏಕದಿನ  ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಂಡಿ ಫ್ಲವರ್ ದಾಖಲೆ ಬ್ರೇಕ್:

ಈ ಹಿಂದೆ ಝಿಂಬಾಬ್ವೆಯ ದಿಗ್ಗಜ ವಿಕೆಟ್‌ಕೀಪರ್-ಬ್ಯಾಟರ್ ಆ್ಯಂಡಿ ಫ್ಲವರ್ ಹೆಸರಲ್ಲಿದ್ದ 6,786 ರನ್‌ಗಳ ದಾಖಲೆಯನ್ನು ಟೇಲರ್ ಮೀರಿದ್ದಾರೆ. ಆ್ಯಂಡಿ ಫ್ಲವರ್ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ಈ ಮೈಲಿಗಲ್ಲು ಸ್ಥಾಪಿಸಿದ್ದರು. ಇದೀಗ 40 ವರ್ಷದ ಟೇಲರ್ ಬಾಂಗ್ಲಾದೇಶ್ ವಿರುದ್ಧ 101 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 81 ರನ್ ಚಚ್ಚುವ ಮೂಲಕ ಝಿಂಬಾಬ್ವೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯ ಅವರ ಒಟ್ಟು ಏಕದಿನ ರನ್‌ಗಳ ಸಂಖ್ಯೆ 6,837 ಕ್ಕೆ ಏರಿದೆ.

ನಿವೃತ್ತಿಯಿಂದ ಕಂಬ್ಯಾಕ್:

ಕಳೆದ ವರ್ಷವಷ್ಟೇ ತಮ್ಮ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಬ್ರೆಂಡನ್ ಟೇಲರ್, ಸಚಿನ್ ತೆಂಡೂಲ್ಕರ್ ಅವರ ಸುದೀರ್ಘ ಏಕದಿನ ವೃತ್ತಿಜೀವನದ ದಾಖಲೆಯನ್ನು ಹಿಂದಿಕ್ಕಿದ್ದರು.

ಬ್ರೆಂಡನ್ ಟೇಲರ್: ಇವರ ಏಕದಿನ ಕ್ರಿಕೆಟ್ ವೃತ್ತಿಜೀವನದ ಒಟ್ಟು ಅವಧಿ 22 ವರ್ಷ ಹಾಗೂ 148 ದಿನಗಳು (2004ರಲ್ಲಿ ಚೊಚ್ಚಲ ಪಂದ್ಯ ಆಡಿದ್ದರು).

  • ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ ವೃತ್ತಿಜೀವನದ ಒಟ್ಟು ಅವಧಿ 22 ವರ್ಷ ಹಾಗೂ 91 ದಿನಗಳು ಆಗಿತ್ತು. (1989 ರಿಂದ 2012ರ ವರೆಗೆ ಆಡಿದ್ದರು).
  • ಬ್ರೆಂಡನ್ ಟೇಲರ್: ಝಿಂಬಾಬ್ವೆ ತಂಡದ ಅನುಭವಿ ಆಟಗಾರ ಬ್ರೆಂಡನ್ ಟೇಲರ್ ಏಕದಿನ ಕ್ರಿಕೆಟ್ ವೃತ್ತಿಜೀವನದ ಒಟ್ಟು ಅವಧಿ 22 ವರ್ಷ ಹಾಗೂ 148 ದಿನಗಳೊಂದಿಗೆ ಮುಂದುವರೆದಿದೆ. (2004ರಲ್ಲಿ ಚೊಚ್ಚಲ ಪಂದ್ಯ ಆಡಿದ್ದರು).

ಇದೀಗ ಝಿಂಬಾಬ್ವೆ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಪೇರಿಸುವ ಮೂಲಕ ಬ್ರೆಂಡನ್ ಟೇಲರ್ ಹೊಸ ಇತಿಹಾಸ ಬರೆದಿದ್ದಾರೆ.

ಇಬ್ಬರು ದಿಗ್ಗಜರ ಅಂಕಿ ಅಂಶಗಳು:

ಆಟಗಾರ ಒಟ್ಟು ರನ್ ಪಂದ್ಯಗಳು ಇನ್ನಿಂಗ್ಸ್ ಶತಕ / ಅರ್ಧಶತಕ ಸರಾಸರಿ
ಬ್ರೆಂಡನ್ ಟೇಲರ್ 6,837 211 209 11 / 40 35.24
ಆಂಡಿ ಫ್ಲವರ್ 6,786 213 208 4 / 55 35.34

ಝಿಂಬಾಬ್ವೆಗೆ 99 ರನ್‌ಗಳ ಭರ್ಜರಿ ಜಯ:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಝಿಂಬಾಬ್ವೆ ತಂಡ ಆರಂಭಿಕ ಕುಸಿತ ಕಂಡಾಗ ಟೇಲರ್ ಹಾಗೂ ಕ್ರೇಗ್ ಇರ್ವಿನ್ (93 ರನ್) ಜೋಡಿ 4ನೇ ವಿಕೆಟ್‌ಗೆ 150 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಈ ಮೂಲಕ ಝಿಂಬಾಬ್ವೆ 50 ಓವರ್‌ಗಳಲ್ಲಿ 271/8 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.

ಇದನ್ನೂ ಓದಿ: 6 ಎಸೆತಗಳಲ್ಲೇ ಯುವರಾಜ್ ಸಿಂಗ್ ದಾಖಲೆ ಉಡೀಸ್ ಮಾಡಿದ ನಮನ್ ಧೀರ್!

ಈ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ್ ತಂಡವು ಬ್ರಾಡ್ ಇವಾನ್ಸ್ (4 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 172 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಝಿಂಬಾಬ್ವೆ 99 ರನ್‌ಗಳ ಬೃಹತ್ ಗೆಲುವಿನೊಂದಿಗೆ ತ್ರಿಕೋನ ಸರಣಿಯಲ್ಲಿ ಶುಭಾರಂಭ ಮಾಡಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More