T20 World Cup 2022: ಈಗ ನಿಮ್ಮನ್ನೆಲ್ಲಾ ನೋಡಿದಾಗ ನನಗೆ ನಗು ಬರುತ್ತಿದೆ…ಇಂತಹದೊಂದು ಹೇಳಿಕೆ ಬಂದಿರುವುದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ (Brett Lee) ಕಡೆಯಿಂದ. ಅದು ಕೂಡ ವಿರಾಟ್ ಕೊಹ್ಲಿಯ (Virat Kohli) ಭರ್ಜರಿ ಬ್ಯಾಟಿಂಗ್ ಬಳಿಕ ಎಂಬುದು ವಿಶೇಷ. ಆದರೆ ಈ ವ್ಯಂಗ್ಯಭರಿತ ಹೇಳಿಕೆಯ ಮೂಲಕ ಬ್ರೇಟ್ ಲೀ ನೇರವಾಗಿ ಮಾತಿನಿಂದ ಚುಚ್ಚಿರುವುದು ಟೀಕಾಗಾರರಿಗೆ ಎಂಬುದು ಇಲ್ಲಿ ಮತ್ತೊಂದು ವಿಶೇಷ.
ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಇಂತಹದೊಂದು ಅಮೋಘ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಕಿಂಗ್ ಕೊಹ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿಯನ್ನು ಗುಣಗಾನ ಮಾಡಿದ್ದ ಬ್ರೇಟ್ ಲೀ, ಈ ಹಿಂದೆ ಟೀಕೆ ಮಾಡಿದವರಿಗೆಲ್ಲಾ ಕೊಹ್ಲಿ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಎಲ್ಲಾ ಆಟಗಾರರಿಗೆ ಕೆಟ್ಟ ಸಮಯ ಎಂಬುದು ಇದ್ದೇ ಇರುತ್ತದೆ. ಆದರೆ ಆ ಅವಧಿಯಲ್ಲಿ ಎಲ್ಲರೂ ಅವರನ್ನು ಟೀಕಿಸಿದ್ದರು. ಇದೆಲ್ಲವೂ ನನಗೆ ತಮಾಷೆಯಾಗಿ ಕಾಣುತ್ತಿತ್ತು. ಏಕೆಂದರೆ ಅವರ್ಯಾರು ಕೂಡ ಕೊಹ್ಲಿಯ ದಾಖಲೆಯನ್ನು ಮತ್ತು ಹಿಂದಿನ ಪ್ರದರ್ಶನವನ್ನು ನೋಡಿರಲಿಲ್ಲ ಅನಿಸುತ್ತದೆ ಎಂದು ಬ್ರೇಟ್ ಲೀ ಹೇಳಿದ್ದಾರೆ.
ಏಕೆಂದರೆ ಏಷ್ಯಾಕಪ್ಗೂ ಮುನ್ನ ಕೊಹ್ಲಿಯನ್ನು ಗುರಿಯಾಗಿಸಲಾಗಿತ್ತು. ಆದರೆ ಮಾನಸಿಕವಾಗಿ ಕುಗಿಸಿದರೂ ಅವರು ಭರ್ಜರಿ ಪ್ರದರ್ಶನದ ಮೂಲಕ ಉತ್ತರ ನೀಡಿದ್ದರು. ಕೊಹ್ಲಿ ಅವರಂಥ ಆಟಗಾರನನ್ನು ಹೆಚ್ಚು ದಿನಗಳ ಕಾಲ ಕೆಳಗಿಸಲು ಸಾಧ್ಯವಿಲ್ಲ. ಇದೀಗ ಅವರನ್ನು ಟೀಕಿಸಿದವರನ್ನು ನೋಡಿದ್ರೆ ನಿಜಕ್ಕೂ ನಗು ಬರುತ್ತಿದೆ ಎಂದು ಬ್ರೇಟ್ ಲೀ ಹೇಳಿದ್ದಾರೆ.
ಇದನ್ನೂ ಓದಿ: India vs Pakistan: ಕ್ಲೀನ್ ಬೌಲ್ಡ್, 3 ರನ್: ಐಸಿಸಿ ನಿಯಮ ಮತ್ತು ವಿವಾದ
ಪಾಕಿಸ್ತಾನ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ, ಅಂತಿಮ ಮೂರು ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಕೊನೆಯ 18 ಎಸೆತಗಳಲ್ಲಿ 48 ರನ್ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾ ಗೆಲ್ಲುವುದು ಕಷ್ಟಸಾಧ್ಯ ಎನ್ನಲಾಗಿತ್ತು. ಆದರೆ ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ಮೂರು ಬೌಂಡರಿಯೊಂದಿಗೆ ವಿರಾಟ್ ಕೊಹ್ಲಿ 17 ರನ್ ಚಚ್ಚಿದ್ದರು.
ಅಲ್ಲದೆ 19ನೇ ಓವರ್ನಲ್ಲಿ ಹ್ಯಾರಿಸ್ ರೌಫ್ಗೆ 2 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 15 ರನ್ ಕಲೆಹಾಕಿದ್ದರು. ಇನ್ನು ಅಂತಿಮ ಓವರ್ನಲ್ಲಿ ಸಿಕ್ಸ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಗೆಲುವನ್ನು ಖಚಿತಪಡಿಸಿದರು. ಅದರಂತೆ ಕೊನೆಯ ಓವರ್ನ ಅಂತಿಮ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಭಾರತ ತಂಡಕ್ಕೆ ಜಯ ತಂದುಕೊಟ್ಟರು.
ಇನ್ನು 53 ಎಸೆತಗಳಲ್ಲಿ 82 ರನ್ಗಳನ್ನು ಬಾರಿಸಿ ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿ ಹೊಸ ಇತಿಹಾಸ ಬರೆದರು.