
ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ (Celebrity Cricket League) ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಮೈಸೂರು ಆತಿಥ್ಯ ನೀಡುತ್ತಿರುವ ಕಾರಣ ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಅದರಲ್ಲೂ ಕಿಚ್ಚ ಸುದೀಪ್ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಕೂಡ ನಿರೀಕ್ಷೆಯಂತೆ ಸೆಮಿಫೈನಲ್ ತಲುಪಿರುವುದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ಇದೀಗ ಟೂರ್ನಿಯ ಸೆಮಿಫೈನಲ್ ಪಂದ್ಯ ಮಾರ್ಚ್ 1 ರಂದು ನಡೆಯಲಿದೆ. ಈ ದಿನದಂದು ನಾಲ್ಕು ತಂಡಗಳು ಫೈನಲ್ಗೆ ಟಿಕೆಟ್ ಪಡೆಯಲು ಸೆಣಸಾಟ ನಡೆಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ಹಾಗೂ ಪಂಜಾಬ್ ದಿ ಶೇರ್ ಮುಖಾಮುಖಿಯಾದರೆ, ಎರಡನೇ ಸೆಮಿಫೈನಲ್‌ನಲ್ಲಿ ರ್ನಾಟಕ ಬುಲ್ಡೋಜರ್ಸ್ ಹಾಗೂ ತಮಿಳ್ ರೈನೋಸ್ ಎದುರುಬದುರಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಕರ್ನಾಟಕ ತಂಡಕ್ಕೆ ಸಂತಸದ ಸುದ್ದಿಯೊಂದು ಸಿಕ್ಕಿದೆ.
ವಾಸ್ತವವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಟೂರ್ನಿಯ ಲೀಗ್ ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 1 ಪಂದ್ಯದಲ್ಲಿ ಸೋಲು ಕಾಣಬೇಕಾಯಿತು. ಹೀಗಾಗಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದಿರುವ ತಮಿಳ್ ರೈನೋಸ್ ತಂಡವನ್ನು ಎದುರಿಸಲಿದೆ.
ಇನ್ನು ತಂಡದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ.. ಟೂರ್ನಿಯೂದ್ದಕ್ಕೂ ಕರ್ನಾಟಕ ತಂಡಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ರಾಜೀವ್ ಹನು ತಂಡದ ಬ್ಯಾಟಿಂಗ್ ಜೀವಾಳವಾಗಿದ್ದರು. ಈ ಇಬ್ಬರನ್ನು ಬಿಟ್ಟರೆ ಕರಣ್ ಆರ್ಯನ್ ಮಾತ್ರ ಹೇಳಿಕೊಳ್ಳುವಂತಹ ಕೆಲವು ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಕರ್ನಾಟಕ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚ ದುರ್ಬಲವಾಗಿದೆ ಎಂದು ತೊರುತ್ತಿತ್ತು. ಇದಕ್ಕೆ ಕಾರಣ ತಂಡದ ಆರಂಭಿಕ ಆಟಗಾರ ಪ್ರದೀಪ್ ಈ ಬಾರಿಯ ಸಿಸಿಎಲ್ನಿಂದ ಹಿಂದೆ ಸರಿದಿದ್ದು, ಪ್ರದೀಪ್ ಅಲಭ್ಯತೆ ತಂಡಕ್ಕೆ ಇದುವರೆಗೆ ಕಾಡಿಲ್ಲವಾದರೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಬೇಕಿತ್ತು. ಇದೀಗ ಅದಕ್ಕೆ ಪೂರಕವಾಗಿ ಕರ್ನಾಟಕ ತಂಡಕ್ಕೆ ಸ್ಫೋಟಕ ಬ್ಯಾಟರ್ನ ಆಗಮನವಾಗಿದೆ. ಹೊಡಿಬಡಿ ದಾಂಡಿಗ ಅರುಣ್ ಬಚ್ಚನ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿರುವುದು ಕಿಚ್ಚನ ಪಡೆಯ ಆತ್ಮಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: CCL 2025: ಮೈಸೂರಿನಲ್ಲಿ ಸಿಸಿಎಲ್ ಸೆಮಿಫೈನಲ್; ಕಿಚ್ಚನ ತಂಡಕ್ಕೆ ಎದುರಾಳಿ ಯಾರು? ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಇಲ್ಲಿಯವರೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ 10 ಆವೃತ್ತಿಗಳು ನಡೆದಿವೆ. ಈ 10 ಆವೃತ್ತಿಗಳಲ್ಲಿ ಅತ್ಯಂತ ಯಶಸ್ವಿ ತಂಡವೆಂದರೆ ತೆಲುಗು ವಾರಿಯರ್ಸ್. ಈ ತಂಡ ಇದುವರೆಗೆ 4 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವಿದೆ. ಇದುವರೆಗೆ ಈ ಲೀಗ್ನಲ್ಲಿ ಕರ್ನಾಟಕ 2 ಬಾರಿ ಚಾಂಪಿಯನ್ ಆಗಿದೆ. ಅಚ್ಚರಿಯ ಸಂಗತಿಯೆಂದರೆ ಇದುವರೆಗೆ ನಡೆದಿರುವ 10 ಆವೃತ್ತಿಗಳಲ್ಲಿ ಕರ್ನಾಟಕ ತಂಡ 7 ಬಾರಿ ಫೈನಲ್ಗೇರಿದೆ. ಆದರೆ 2 ಬಾರಿ ಮಾತ್ರ ಚಾಂಪಿಯನ್ ಕಿರೀಟ ತೊಟ್ಟಿದ್ದು, ಉಳಿದಂತೆ 5 ಬಾರಿ ರನ್ನರ್ ಅಪ್ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕಳೆದ ಬಾರಿಯೂ ಕರ್ನಾಟಕ ಫೈನಲ್ ತಲುಪಿತ್ತು. ಆದರೆ ಫೈನಲ್ ಹಣಾಹಣಿಯಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಕರ್ನಾಟಕ ತಂಡ ಮತ್ತೊಮ್ಮೆ ಫೈನಲ್ಗೇರಿ ಟ್ರೊಫಿ ಎತ್ತಿಹಿಡಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ